
ಉದಯವಾಹಿನಿ, ಬೀದರ್ :ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಸಾಗರ ದಾಂಡೇಕರ್ ಹೇಳಿದರು.ಸ್ಪರ್ಧಾ ಗುರು ಐಎಎಸ್ ಮತ್ತು ಕೆಎಎಸ್ ಸ್ಟಡಿ ಸೇಂಟರ್ ವತಿಯಿಂದ ನಗರದಲ್ಲಿ ನಡೆದ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ತಾಳ್ಮೆ ಮತ್ತು ಸಹನೆ ವಿದ್ಯಾರ್ಥಿಗಳ ಮೂಲ ಗುಣವಾಗಬೇಕು. ಮಾತು ಕಡಿಮೆಯಾದರೆ ಸಾಧನೆಗೆ ಬಲಬರುತ್ತದೆ. ಹರಟೆ ಮಾತುಗಳಿಗಿಂತ ಮೌಲ್ಯಯುತವಾದ ಮಾತು ವಿದ್ಯಾರ್ಥಿಗಳಿಗೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಬಲ ನೀಡಲಿದೆ. ಮೌನ ಎಂಬುದು ಸಾಧಕನ ಮೂಲಗುಣವಾಗಿದೆ. ಮೌನಿಯಾದವನು ಹೆಚ್ಚು ಹೆಚ್ಚು ವಿಷಯ ವಿಚಾರಗಳನ್ನು ಮನನ ಮಾಡಿಕೊಳ್ಳಲು ಸಾಧ್ಯವಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಕಲಿಕೆಯ ಜತೆಗೆ ಜಾಗತಿಕ ಕಡೆ ಗಮನ ಹರಿಸಬೇಕು. ಸಮಾಜದಲ್ಲಿ ಜ್ಞಾನ ಗಳಿಸಿಕೊಂಡವರಿಗೆ ಮಾತ್ರ ಬೆಲೆಯಿದ್ದು, ಜ್ಞಾನ ಸಂಪಾದನೆಯ ಕಡೆಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂದಿನ ಯುಗದಲ್ಲಿ ಬೆರಳ ತುದಿಯಲ್ಲಿಯೇ ಎಲ್ಲ ಮಾಹಿತಿ ಲಭ್ಯವಾಗಲಿದ್ದು ತಂತ್ರಜ್ಞಾನ ಬಳಕೆಯ ಜತೆಗೆ ಉತ್ತಮ ಮಾರ್ಗದರ್ಶಕರ ಸಹಕಾರದಿಂದ ಗುರಿ ಸಾಧಿಸಹುದು ಎಂದು ಹೇಳಿದರು.
ಸ್ಪರ್ಧಾ ಗುರು ತರಬೇತಿ ಕೇಂದ್ರದ ನಿರ್ದೇಶಕ ಅಮೀತ್ ಸೋಲಪೂರೆ ಮಾತನಾಡಿ, ಸದಾ ಕಾಲ ಅಧ್ಯಯನದಲ್ಲಿ ತೊಡಗಿ ಯಾವುದೇ ರೀತಿಯ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.
ಜಿಪಿಎಸಟಿಆರ್ ಶಿಕ್ಷಕರಾಗಿ ಆಯ್ಕೆಯಾದ ಹಾಗೂ ಟಿಇಟಿ ಅರ್ಹತೆ ಪಡೆದ ಸ್ಪರ್ಧಾರ್ಥಿಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷ ನಾಗೊರೆ, ಪಿಡಿಒ ದೇವಪ್ಪ, ಬಸವರಾಜ ಬಿರಾದಾರ, ನಾಗೇಶ್ ಬಿರಾದಾರ, ಲಕ್ಷ್ಮಣ ಪೂಜಾರಿ, ರಮೇಶ್ ಮರ್ಜಾಪುರ, ಜಗನ್ನಾಥ, ಗೌರೀಶ, ವಿನೋದ ಸೇರಿದಂತೆ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.
