ಉದಯವಾಹಿನಿ, ಬೀದರ್ : ಸುಂದರ, ಸಮೃದ್ಧ ಬೀದರ್ ಜಿಲ್ಲೆಗಾಗಿ ಶ್ರಮಿಸಿ, ರಾಜ್ಯದ ಅತೀ ಮುಂದುವರೆದ ಐದು ಜಿಲ್ಲೆಗಳ ಸಾಲಿನಲ್ಲಿ ಸ್ಥಾನ ಪಡೆಯುವಂತೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಭರವಸೆ ನೀಡಿದರು.
ನಾಗರಿಕ ಅಭಿನಂದನಾ ಸಮಿತಿಯು ನಗರದ ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಇಬ್ಬರೂ ಸಚಿವರು, ಶಿಕ್ಷಣ, ಶಿಕ್ಷಣ, ಮತ್ತಿತರ ಕ್ಷೇತ್ರಗಳನ್ನು ಬಲಪಡಿಸುವ ಮೂಲಕ ಜಿಲ್ಲೆಯ ಚಿತ್ರಣ ಬದಲಾಯಿಸಲಾಗುತ್ತದೆ ಎಂದು ಹೇಳಿದರು.
ಬೀದರ್ ಜಿಲ್ಲೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಇತರ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ, ತಲಾ ಆದಾಯದಲ್ಲಿ ಉತ್ತಮ ಸ್ಥಾನದಲ್ಲಿದೆ. ಆದರೆ, ಜಿಲ್ಲೆಯನ್ನು ರಾಜ್ಯದ ಮುಂದುವರೆದ ಜಿಲ್ಲೆಗಳ ಸಾಲಿಗೆ ಸೇರಿಸುವ ಕೆಲಸ ಆಗಬೇಕಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿನ ವ್ಯವಸ್ಥೆಯನ್ನು ಸರಿಪಡಿಸಿ, ಅಗತ್ಯ ಮೂಲ ಸೌಲಭ್ಯ ಒದಗಿಸಿ, ಶಕ್ತಿ ನೀಡಲಾಗುತ್ತದೆ. ಅಭಿವೃದ್ಧಿಯ ವೇಗ ಹೆಚ್ಚಿಸುವಲ್ಲಿ ಈ ಎರಡೂ ಕ್ಷೇತ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಹಿಂದಿನ ಸರಕಾರ ಬೀದರ್ ವಿಶ್ವವಿದ್ಯಾಲಯ ಘೋಷಿಸಿ ಬರೀ 2 ಕೋಟಿ ರೂ. ನೀಡಿದೆ. ಈ ಅಲ್ಪಮೊತ್ತದಲ್ಲಿ ಹೊಸ ವಿಶ್ವವಿದ್ಯಾಲಯ ಕಟ್ಟುವುದು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ನೂತನ ವಿವಿ ಸ್ಥಾಪಿಸಲು ಕನಿಷ್ಠ 500 ಕೋಟಿ ರೂ. ಬೇಕು. ವರ್ಷಕ್ಕೆ ಕನಿಷ್ಠ 50 ಕೋಟಿ ರೂ. ಅನುದಾನ ನೀಡಬೇಕಾಗುತ್ತದೆ ಎಂದು ಹೇಳಿದರು.
              ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆ ಹೆಚ್ಚಿವೆ. ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಆಗಬೇಕಾಗಿದೆ. ನಗರದಲ್ಲಿರುವ ಬ್ರಿಮ್ಸ್ ಆಸ್ಪತ್ರೆಯನ್ನು ಸುಧಾರಿಸಬೇಕಾಗಿದೆ. ಟ್ರಾಮಾ ಕೇರ್, ನ್ಯೂರೋ, ಕ್ಯಾಥ್‌ಲ್ಯಾಬ್ ಆರಂಭಿಸಬೇಕಾಗಿದೆ. ಸೋಮವಾರ ಸಚಿವ ರಹೀಂ ಖಾನ್ ಹಾಗೂ ಹಿರಿಯ ಅದಿಕಾರಿಗಳೊಂದಿಗೆ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ ಎಂದು ಸಚಿವ ಖಂಡ್ರೆ ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ ಹಿಂದಿನ ಸರಕಾರ 3000 ಕೋಟಿ ಕೊಟ್ಟಿದಾಗಿ ಹೇಳಿತ್ತು. ಆದರೆ, ಖರ್ಚಾಗಿದ್ದು ಬರೀ ಶೇ. 24 ರಷ್ಟು ಎಂದು ಕುಟುಕಿದರು. ನಮ್ಮ ಸರಕಾರ 5000 ಕೋಟಿ ರೂ. ನೀಡಲಿದೆ. ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುವುದು ಸೇರಿದಂತೆ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ. ಮಾರ್ಚ್ ಅಂತ್ಯದೊಳಗೆ ನಿಗದಿತ ಮೊತ್ತ ಖರ್ಚು ಮಾಡಲಾಗುತ್ತದೆ ಎಂದರು.
                ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, 15 ವರ್ಷಗಳ ಅವಧಿಯಲ್ಲಿ ಬೀದರ್ ಸಾಕಷ್ಟು ಬದಲಾಗಿದೆ ಎಂದರು. ಹೊಸ ಹೊಸ ಆಸ್ಪತ್ರೆಗಳು ಆರಂಭವಾಗಿವೆ. ಶಾಲಾ ಕಾಲೇಜು, ವಸತಿಸಹಿತ ಶಾಲೆಗಳನ್ನು ಶುರು ಮಾಡಲಾಗಿದೆ. ರಸ್ತೆ, ಕುಡಿಯುವ ನೀರು, ಚರಂಡಿ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಬೀದರ್ ನಗರವನ್ನು ಸುಂದರಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಗುಲಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ. ಮೂಲಿಮನಿ ಅಭಿನಂದನಾ ಭಾಷಣ ಮಾಡಿದರು. ನಾಗರಿಕ ಅಭಿನಂದನಾ ಸಮಿತಿ ಅದ್ಯಕ್ಷ ಡಾ. ಚೆನ್ನಸಬವಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಡಾ. ಬೆಲ್ದಾಳ್ ಶರಣರು, ಅನುಭವ ಮಂಟಪ ಸಂಚಾಲಕರಾದ ಪೂಜ್ಯ ಶಿವಾನಂದ ದೇವರು, ಪ್ರಮುಖರಾದ ಡಾ. ಎಸ್. ಬಲಬೀರಸಿಂಗ್, ಬಸವರಾಜ ಜಾಬಶೆಟ್ಟಿ, ಬಿ.ಜಿ. ಶೆಟಕಾರ್, ಡಾ. ರಜನೀಶ ವಾಲಿ, ಸಮಿತಿಯ ಸದಸ್ಯರಾದ ಡಾ. ಗುರಮ್ಮ ಸಿದ್ದಾರೆಡ್ಡಿ, ವೈಜನಾಥ ಕಮಠಾಣೆ, ಅಮೃತರಾವ ಚಿಮಕೋಡೆ, ಡಾ.ಪೂರ್ಣಿಮಾ ಜಿ, ಗೀತಾ ಪಂಡಿತರಾವ್ ಚಿದ್ರಿ, ಶಂಕರರಾವ ಹೊನ್ನಾ, ಆನಂದ ದೇವಪ್ಪ, ಶಿವಯ್ಯ ಸ್ವಾಮಿ, ಅಶೋಕಕುಮಾರ ಹೆಬ್ಬಾಳೆ, ಶಾಂತಲಿಂಗ ಸಾವಳಗಿ, ಮಲ್ಲಿಕಾರ್ಜುನ ಸ್ವಾಮಿ, ಎಸ್.ಬಿ. ಕೂಚಬಾಳ್, ಪ್ರೊ. ಶಂಭುಲಿಂಗ ಕಾಮಣ್ಣ, ಶಿವಾನಂದ ಗುಂದಗಿ, ನಿಜಲಿಂಗಪ್ಪ ತಗಾರೆ, ಮಲ್ಲಮ್ಮ ಸಂತಾಜಿ, ಡಾ. ಸುನೀತಾ ಕೂಡ್ಲಿಕರ್, ಡಾ. ಮಹಾನಂದಾ ಮಡಕಿ, ಡಾ. ಸಂಗಪ್ಪ ತವಡಿ, ಶಿವಶರಣಪ್ಪ ಗಣೇಶಪೂರ, ಪ್ರಕಾಶ ಕನ್ನಾಳೆ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಎಂಎಲ್‌ಸಿ ಕೆ. ಪುಂಡಲೀಕರಾವ್, ಪ್ರೊ. ಎಸ್.ಬಿ. ಬಿರಾದಾರ್ ಮತ್ತಿತರ ಗಣ್ಯರು ಇದ್ದರು.ಸಮಿತಿಯ ಕಾರ್ಯದರ್ಶಿ ಡಾ. ಅಬ್ದುಲ್ ಖದೀರ್ ಸ್ವಾಗತಿಸಿದರು. ಸಂಯೋಜಕ ಡಾ. ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತಾಡಿದರು. ಡಾ. ಸಂಜೀವಕುಮಾರ ಜುಮ್ಮಾ ನಿರೂಪಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!