ಉದಯವಾಹಿನಿ, ಧಾರವಾಡ: ಲ್ಯಾಬ್ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಹೋದ ಯುವತಿಯೊಬ್ಬಳು ಕೊಲೆಯಾದ ರೀತಿಯಲ್ಲಿ ಇಂದು ಶವವಾಗಿ ಪತ್ತೆಯಾದ ಘಟನೆ ಧಾರವಾಡದ ಹೊರವಲಯದಲ್ಲಿ ನಡೆದಿದೆ.
19 ವರ್ಷದ ಯುವತಿಯ ಶವ ಇದಾಗಿದ್ದು, ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿ ಯುವತಿಯ ಶವವನ್ನು ಇಲ್ಲಿ ತಂದು ಬಿಸಾಡಿರುಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಸುದ್ದಿ ತಿಳಿದ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧಾರವಾಡದ ಗಾಂಧಿ ಚೌಕ ನಿವಾಸಿಯಾದ ಈ ಯುವತಿ ಪ್ಯಾರಾಮೆಡಿಕಲ್ ಓದಿಕೊಂಡಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ನಿನ್ನೆ ಮಧ್ಯಾಹ್ನ ಲ್ಯಾಬ್ಗೆ ಹೋಗುವುದಾಗಿ ಮನೆಯಿಂದ ಹೊರ ಹೋಗಿದ್ದಳು. ಆದರೆ, ಇಂದು ಕೊಲೆಯಾದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ತಡರಾತ್ರಿ ಆದರೂ ತಮ್ಮ ಪುತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮೊಬೈಲ್ ಜಾಡು ಹಿಡಿದು ಆಕೆಯ ಪೋಷಕರು ಹಾಗೂ ಮನೆಯವರು ಮಧ್ಯರಾತ್ರಿವರೆಗೆ ಅಲ್ಲಿ – ಇಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ಕತ್ತಲೆಯಾದ ಹಿನ್ನೆಲೆಯಲ್ಲಿ ಏನೂ ಕಾಣದಿದ್ದರಿಂದ ಹಿಂತಿರುಗಿದ್ದ ಕುಟುಂಬಸ್ಥರು, ಮತ್ತೊಮ್ಮೆ ಬೆಳಗ್ಗೆ ಹುಡುಕಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯುವತಿಯು ಮೃತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯುವತಿಯ ಕತ್ತಿನಲ್ಲಿ ಗಾಯವಾದ ಕಲೆ ಪತ್ತೆ ಆಗಿದೆ. ಸೋಕೋ ಟೀಂ ಕೂಡ ಸ್ಥಳಕ್ಕೆ ಭೇಟಿ ಮಾಹಿತಿ ಕಲೆ ಹಾಕುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಈ ಬಗ್ಗೆ ಮತ್ತಷ್ಟು ಮಾಹಿತಿ ಗೊತ್ತಾಗಬಹುದು ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
