ಉದಯವಾಹಿನಿ, ತಿರುವನಂತಪುರಂ: ವ್ಯೂವ್ಸ್‌ಗಾಗಿ ಬಸ್ಸಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ಕಿರುಕುಳದ ವೀಡಿಯೊವನ್ನು ಹಂಚಿಕೊಂಡಿದ್ದ ಶಿಂಜಿತಾ ಮುಸ್ತಫಾಳನ್ನು ಕೇರಳ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೋಯಿಕ್ಕೋಡ್‌ನ ಬಡಗರದಲ್ಲಿರುವ ಸಂಬಂಧಿಕರ ಮನೆಯಲ್ಲಿದ ಆಕೆಯನ್ನು ಬಂಧಿಸಿದ್ದಾರೆ.
ಖಾಸಗಿ ಬಸ್ಸಿನಲ್ಲಿ ದೀಪಕ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಿಂಜಿತಾ ಮುಸ್ತಫಾ ಆರೋಪಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ದೀಪಕ್‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ದೀಪಕ್‌ ಆತ್ಮಹತ್ಯೆ ಮಾಡಿದ ನಂತರ ಈ ಪ್ರಕರಣ ತಿರುವು ಪಡೆದುಕೊಂಡಿತ್ತು. ದೀಪಕ್‌ ಅವರದ್ದು ಯಾವುದೇ ತಪ್ಪಿಲ್ಲದೇ ಇದ್ದರೂ ಅವರ ಬಳಿಯೇ ಹೋಗಿ ಆಕೆ ವಿಡಿಯೋ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಪ್ರಚಾರಕ್ಕಾಗಿ ವಿಡಿಯೋ ಮಾಡಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಕ್ಕೆ ಶಿಂಜಿತಾಳನ್ನು ಬಂಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.

ದೀಪಕ್ ಅವರ ಪೋಷಕರು ಸಲ್ಲಿಸಿದ ದೂರಿನ ನಂತರ ಪೊಲೀಸರು ಜಾಮೀನು ರಹಿತ ಸೆಕ್ಷನ್‌ ಅಡಿ ಕೇಸ್‌ ದಾಖಲಿಸಿದ್ದರು. ಪ್ರಕರಣ ದಾಖಲಾದ ಬಳಿಕ ಶಿಂಜಿತಾ ಫೋನ್‌ ಸ್ವಿಚ್‌ ಆಫ್‌ ಮಾಡಿ ನಾಪತ್ತೆಯಾಗಿದ್ದಳು. ಕೋರ್ಟ್‌ ಶಿಂಜಿತಾ ಮುಸ್ತಫಾಳಿಗೆ 4 ದಿನದ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ.  ವಿಡಿಯೋದಲ್ಲಿರುವ ದೃಶ್ಯದಲ್ಲಿ ಇಬ್ಬರ ಮಧ್ಯೆ ಯಾವುದೇ ವಾಗ್ವಾದ, ಗಲಾಟೆ ನಡೆದಿರಲಿಲ್ಲ. ಪೊಲೀಸರು ಚಾಲಕ, ಕಂಡಕ್ಟರ್ ಮತ್ತು ಇತರ ಬಸ್ ಪ್ರಯಾಣಿಕರಿಂದ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅವರೆಲ್ಲರೂ ಪ್ರಯಾಣದ ಸಮಯದಲ್ಲಿ ಯಾವುದೇ ದೂರು ಅಥವಾ ಅಸಾಮಾನ್ಯ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.  ಶಿಂಜಿತಾ ಬಸ್‌ನಲ್ಲಿರುವಾಗ ತನ್ನ ಮೇಲೆ ದೌರ್ಜನ್ಯ ನಡೆದ ಬಗ್ಗೆ ಯಾವುದೇ ಸಹಾಯವನ್ನು ಕೋರಿಲ್ಲ ಎಂದು ಕಂಡಕ್ಟರ್ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!