ಉದಯವಾಹಿನಿ, ಭದೇರ್ವಾ : ದೋಡಾ ಜಿಲ್ಲೆಯ ಥನಾಲಾದ ಮೇಲ್ಭಾಗದ ಪ್ರದೇಶದಲ್ಲಿನ ಭದೇರ್ವಾ -ಚಂಬಾ ರಸ್ತೆಯಲ್ಲಿ ಸೇನಾ ವಾಹನವೊಂದು ಅಪಘಾತಕ್ಕೀಡಾಗಿ, ಕನಿಷ್ಠ 10 ಸೈನಿಕರು ಸಾವನ್ನಪ್ಪಿದ್ದು, 11 ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಒಟ್ಟು 21 ಸೈನಿಕರು ಪ್ರಯಾಣಿಸುತ್ತಿದ್ದ ವಾಹನವೊಂದು ರಸ್ತೆಯಿಂದ ಜಾರಿದ ಪರಿಣಾಮ 10 ಸೈನಿಕರು ಸಾವನ್ನಪ್ಪಿದರು ಮತ್ತು 11 ಮಂದಿ ಗಂಭೀರವಾಗಿ ಗಾಯಗೊಂಡರು. ಅವರನ್ನು ಇದೀಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿರುವ ಓರ್ವ ಸೈನಿಕನಿಗೆ ಭದೇರ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭದೇರ್ವಾ ಬ್ಲಾಕ್ ವೈದ್ಯಕೀಯ ಅಧಿಕಾರಿ (ಬಿಎಂಒ) ಡಾ. ವರ್ಷಾ ಶರ್ಮಾ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಥನಾಲಾ ಬಳಿಯ ಖನ್ನಿ ಟಾಪ್‌ನಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿದೆ. ರಸ್ತೆಯಲ್ಲಿ ಹಿಮ ಬಿದ್ದಿದ್ದರಿಂದ ವಾಹನವು ಆಳವಾದ ಕಂದಕಕ್ಕೆ ಉರುಳಿ ಸೈನಿಕರಿಗೆ ಸಾವುನೋವು ಮತ್ತು ತೀವ್ರ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಭದೇರ್ವಾ ಉಪ – ಜಿಲ್ಲಾ ಆಸ್ಪತ್ರೆಗೆ ತಲುಪಿದ್ದು, ಗಾಯಗೊಂಡ ಸೈನಿಕರ ಚಿಕಿತ್ಸೆ ಮತ್ತು ಉನ್ನತ ಸೌಲಭ್ಯಗಳಿಗೆ ಸ್ಥಳಾಂತರದ ಮೇಲ್ವಿಚಾರಣೆ ನಡೆಸಿದ್ದಾರೆ. ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ಸಹಾಯ ಮಾಡಲು ಜಿಎಂಸಿ ದೋಡಾದಿಂದ ಆಂಬ್ಯುಲೆನ್ಸ್‌ಗಳೊಂದಿಗೆ ವೈದ್ಯರು ಮತ್ತು ಅರೆವೈದ್ಯರ ತಂಡವನ್ನು ಕರೆಸಿ ಸ್ಥಳದಲ್ಲಿ ನಿಯೋಜಿಸಲಾಗಿದೆ.
