ಉದಯವಾಹಿನಿ, ಚಂಡೀಗಢ: ಹೋಂ ವರ್ಕ್ ಸರಿಯಾಗಿ ಬರೆಯಲಿಲ್ಲ ಎಂದು ಹೆತ್ತ ತಂದೆಯೇ 4 ವರ್ಷದ ಮಗಳನ್ನು ಹೊಡೆದು ಕೊಂದ ಘಟನೆ ಫರೀದಾಬಾದ್‌ನಲ್ಲಿ ನಡೆದಿದೆ.
ಕೃಷ್ಣ ಜೈಸ್ವಾಲ್ (31) ಮಗಳನ್ನು ಕೊಂದ ತಂದೆ. ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಖೇರತಿಯಾ ಗ್ರಾಮ ಮೂಲದ ಕೃಷ್ಣ ಜೈಸ್ವಾಲ್ ಹಾಗೂ ಪತ್ನಿ ಇಬ್ಬರೂ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದು, ತನ್ನ ಕುಟುಂಬದೊಂದಿಗೆ ಫರೀದಾಬಾದ್‌ನಲ್ಲಿ ವಾಸಿಸುತ್ತಿದ್ದರು. ಜ.21ರಂದು ಪತ್ನಿ ಬೆಳಗ್ಗೆ ಕೆಲಸಕ್ಕೆಂದು ತೆರಳಿದ್ದ ವೇಳೆ ಜೈಸ್ವಾಲ್ ಮನೆಯಲ್ಲಿ ಮಗಳನ್ನು ನೋಡಿಕೊಂಡು ಇದ್ದ. ಈ ವೇಳೆ 1ರಿಂದ 50ರವರೆಗೆ ಸಂಖ್ಯೆಗಳನ್ನು ಬರೆಯುವಂತೆ ಜೈಸ್ವಾಲ್ ಮಗಳಿಗೆ ಹೇಳಿದ್ದಾನೆ. ಮಗಳು ಸಂಖ್ಯೆಗಳನ್ನು ಸರಿಯಾಗಿ ಬರೆಯದ ಹಿನ್ನೆಲೆ ಕೋಪಗೊಂಡ ಕೃಷ್ಣ ಜೈಸ್ವಾಲ್ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಮಗಳು ಮೃತಪಟ್ಟಿದ್ದಾಳೆ.
ಸಂಜೆ ಜೈಸ್ವಾಲ್ ಪತ್ನಿ ಮನೆಗೆ ಮರಳಿದ ವೇಳೆ ಮಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಆರೋಪಿ ಕೃಷ್ಣ ಜೈಸ್ವಾಲ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಒಂದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಫರೀದಾಬಾದ್ ಪೊಲೀಸರು ತಿಳಿಸಿದ್ದಾರೆ.
