ಉದಯವಾಹಿನಿ,ನವದೆಹಲಿ: ಒಂದು ದಶಕಕ್ಕೂ ಹೆಚ್ಚು ಕಾಲ ಕೋಮಾದಂತಹ ಸ್ಥಿತಿಯಲ್ಲಿದ್ದ 32 ವರ್ಷದ ವ್ಯಕ್ತಿಗೆ ಸುಪ್ರೀಂಕೋರ್ಟ್ ಬುಧವಾರ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದು ಸುಪ್ರೀಂ ಕೋರ್ಟ್‌ನ ಮೊದಲ ಐತಿಹಾಸಿಕ ಆದೇಶವಾಗಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಹರಿಯಾಣದ 32 ವರ್ಷದ ವ್ಯಕ್ತಿ ಹರೀಶ್ ರಾಣಾ ಸುಮಾರು 13 ವರ್ಷಗಳಿಂದ ಚಲಿಸಲು ಹಾಗೂ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. 2013ರಲ್ಲಿ, ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ಪೇಯಿಂಗ್ ಗೆಸ್ಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ದುರಂತ ಸಂಭವಿಸಿತ್ತು. ತಲೆಗೆ ಗಾಯಗಳಾಗಿ ಅಂದಿನಿಂದಲೂ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದ ಅವರು, ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಿದ್ದ ಪಿಇಜಿ ಟ್ಯೂಬ್‌ಗಳ ಮೂಲಕ ನೀಡಲಾಗುವ ಕ್ಲಿನಿಕಲಿ ಅಡ್ಮಿನಿಸ್ಟರಿಡ್ ನ್ಯೂಟ್ರಿಷನ್ (ಸಿಎಎನ್) ನೆರವಿನಿಂದ ಮಾತ್ರ ಜೀವಂತವಾಗಿದ್ದರು.
ಕುಟುಂಬಸ್ಥರು ಹರೀಶ್​ ಅವರ ಜೀವ ಉಳಿಸುವ ಚಿಕಿತ್ಸೆಯನ್ನು ನಿಲ್ಲಿಸುವ ದಯಾಮರಣಕ್ಕೆ ಕೋರಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಜನವರಿ 15ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್​​, ಆದೇಶವನ್ನು ಕಾಯ್ದಿರಿಸಿತ್ತು.
ಕೇಂದ್ರ ಸರ್ಕಾರದ ಪ್ರತಿನಿಧಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಮತ್ತು ಹರೀಶ್ ಅವರ ಕುಟುಂಬದ ಪರವಾಗಿ ಹಾಜರಾದ ವಕೀಲೆ ರಶ್ಮಿ ನಂದಕುಮಾರ್ ಅವರು ವಾದ ಮಂಡಿಸಿದ್ದರು.
ಹರೀಶ್​ ಅವರು ಮಿದುಳಿನ ಗಾಯದಿಂದಾಗಿ 100% ಕ್ವಾಡ್ರಿಪ್ಲೆಜಿಯಾದಿಂದ ಇಂತಹ ದಯನೀಯ ಸ್ಥಿತಿಗೆ ತಲುಪಿದ್ದರು. ಕಳೆದ 13 ವರ್ಷಗಳಲ್ಲಿ ಅವರ ಸ್ಥಿತಿ ಸುಧಾರಿಸಿಲ್ಲ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ ಎಂದು ನ್ಯಾಯಪೀಠವು ಹೇಳಿತು.

ಅರ್ಜಿದಾರರು ಅಪಾರ ನೋವು ಹಾಗೂ ಸಂಕಟದ ಜೀವನ ನಡೆಸುತ್ತಿದ್ದಾರೆ. ತಮ್ಮ ದುಃಖ ವ್ಯಕ್ತಪಡಿಸುವ ಸಾಮರ್ಥ್ಯವೂ ಕೂಡ ಅವರಿಗಿಲ್ಲ. ಪೋಷಕರು ಮತ್ತು ಒಡಹುಟ್ಟಿದವರು ಅವರಿಗೆ ಬೆಂಬಲದ ಅಚಲ ಸ್ತಂಭಗಳಾಗಿ ನಿಂತಿರುವುದಕ್ಕೆ ನಾವು ಅಪಾರ ಗೌರವ ನೀಡುತ್ತೇವೆ. ಅವರನ್ನು ನೋಡಿಕೊಳ್ಳಲು ಸಂಪೂರ್ಣ ಸಮರ್ಪಣೆಯೊಂದಿಗೆ ತಮ್ಮಿಂದಾಗುವ ಎಲ್ಲಾ ಪ್ರಯತ್ನ ಮಾಡಿದ್ದಾರೆ. ಪ್ರತಿಕೂಲ ಸ್ಥಿತಿಯಲ್ಲಿ ಅವರು ತೋರಿದ ಅಪಾರ ಪ್ರೀತಿ, ಸಹಿಷ್ಣುತೆ ಮತ್ತು ದಯೆಗೆ ನಾವು ನಮ್ಮ ಆಳವಾದ ಕೃತಜ್ಞತೆ ಸಲ್ಲಿಸುತ್ತೇವೆ. ಈ ಪ್ರಕರಣವು ಪ್ರೀತಿ ಶಾಶ್ವತ ಎಂಬುದನ್ನು ಸಾಬೀತುಪಡಿಸಿದೆ ಎಂದು ಪೀಠ ತಿಳಿಸಿದೆ.

ಜನವರಿ 13ರಂದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ವೈಯಕ್ತಿಕವಾಗಿ ಹರೀಶ್ ಅವರ ಪೋಷಕರು ಮತ್ತು ಅವರ ಕಿರಿಯ ಸಹೋದರನನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ, ಹರೀಶ್​ ಇನ್ನುಮುಂದೆ ಬಳಲುವುದು ಬೇಡವೆಂದು ತಾವು ಬಯಸಿರುವುದಾಗಿ ಕುಟುಂಬವು ನ್ಯಾಯಮೂರ್ತಿಗಳಿಗೆ ತಿಳಿಸಿತ್ತು. ಹರೀಶ್‌ಗೆ ನಿಷ್ಕ್ರಿಯ ದಯಾಮರಣ ಕೋರಿ ಅವರ ಪೋಷಕರು ಸುಪ್ರೀಂಕೋರ್ಟ್‌ಗೆ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ನವೆಂಬರ್ 2025ರಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯದ ವರದಿಯನ್ನು ಸುಪ್ರೀಂಕೋರ್ಟ್ ಗಮನಿಸಿತ್ತು. ಹರೀಶ್ ಅವರನ್ನು ಉತ್ತರ ಪ್ರದೇಶ ಸರ್ಕಾರದ ಸಹಾಯ ಮತ್ತು ವೈದ್ಯರು ಹಾಗೂ ಭೌತಚಿಕಿತ್ಸಕರ ನಿಯಮಿತ ಭೇಟಿಯೊಂದಿಗೆ ಮನೆಯ ಆರೈಕೆಯಲ್ಲಿ ಇರಿಸಲಾಗುವುದು ವರದಿಯಲ್ಲಿ ತಿಳಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!