ಉದಯವಾಹಿನಿ, ನವದೆಹಲಿ: ಯುವಕರಿಗೆ ದೇಶ ಮತ್ತು ವಿದೇಶಗಳಲ್ಲಿ ಹೊಸ ಹೊಸ ಅವಕಾಶ ಸೃಷ್ಟಿಸಲು ವಿವಿಧ ರಾಷ್ಟ್ರಗಳೊಂದಿಗೆ ಭಾರತ ವ್ಯಾಪಾರ ಮತ್ತು ಚಲನಶೀಲತೆ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಿಳಿಸಿದರು.
18ನೇ ರೋಜ್‌ಗಾರ್ ಮೇಳದಲ್ಲಿ ಪ್ರಧಾನಿ ಮೋದಿ ಅವರು ವರ್ಚುಯಲ್ ಆಗಿ ಭಾಗಿಯಾಗಿ ಮಾತನಾಡಿದರು. ಇದೇ ವೇಳೆ, ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕವಾದ 61,000 ಜನರಿಗೆ ನೇಮಕಾತಿ ಪತ್ರಗಳನ್ನು ಪ್ರಧಾನಿ ಹಸ್ತಾಂತರಿಸಿದರು.”ಹಲವು ದೇಶಗಳ ಜೊತೆ ಹೊಸ ವ್ಯಾಪಾರ ಒಪ್ಪಂದಗಳಿಗೆ ಭಾರತ ಸಹಿ ಹಾಕುತ್ತಿದೆ. ಈ ಒಪ್ಪಂದಗಳಿಂದ ದೇಶದ ಯುವಕರಿಗೆ ಹೊಸ ಅವಕಾಶಗಳು ಸಿಗಲಿವೆ” ಎಂದು ಮೋದಿ ಭರವಸೆ ನೀಡಿದರು.ಜಗತ್ತಿನಲ್ಲಿ ಅತೀ ಹೆಚ್ಚು ಯುವಕರಿರುವ ದೇಶ ಭಾರತ. ಅಂತೆಯೇ ಸರ್ಕಾರವು ದೇಶ ವಿದೇಶಗಳಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಆಹ್ವಾನದಂತೆ ಮತ್ತು ಅಭಿವೃದ್ಧಿಶೀಲ ಭಾರತಕ್ಕಾಗಿ ಸೇವೆ ಮಾಡುವ ಪ್ರತಿಜ್ಞೆಯಾಗಿ ಈ ನೇಮಕಾತಿ ಪತ್ರಗಳನ್ನು ಪರಿಗಣಿಸುವಂತೆ ಹೊಸದಾಗಿ ನೇಮಕವಾದವರಿಗೆ ಪ್ರಧಾನಿ ಮೋದಿ ಕರೆ ನೀಡಿದರು.ಸರ್ಕಾರಿ ಕಚೇರಿಗಳಲ್ಲಿ ಈ ಹಿಂದೆ ತಮ್ಮ ಮೇಲೆ ಆದ ಅನುಭವ ನೆನಪಿಸಿಕೊಂಡು, ತಮ್ಮ ಅಧಿಕಾರಾವಧಿಯಲ್ಲಿ ಅದೇ ರೀತಿ ಕಷ್ಟಗಳು ನಾಗರಿಕರ ಮೇಲೆ ಆಗದಂತೆ ಸಂಕಲ್ಪ ಮಾಡಬೇಕು. ಕರ್ತವ್ಯ ನಿರ್ವಹಿಸುವಾಗ ‘ನಾಗರಿಕ ದೇವೋ ಭವ’ ಎಂಬ ಧ್ಯೇಯ ವಾಕ್ಯದೊಂದಿಗೆ ಸೇವೆ ಸಲ್ಲಿಸುವಂತೆ ಯುವಕರಿಗೆ ಮೋದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಸಿಆರ್‌ಪಿಎಫ್ ಮತ್ತು ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.ಯುವಕರಿಗೆ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಿ ಮೋದಿ ಅವರ ಬದ್ಧತೆಗೆ ಅನುಗುಣವಾಗಿಯೇ ಕಾರ್ಯರೂಪಕ್ಕೆ ತಂದ ಪ್ರಮುಖ ಯೋಜನೆ ರೋಜ್‌ಗಾರ್ ಮೇಳ ಎಂದು ಪ್ರಧಾನಿ ಕಚೇರಿ (ಪಿಎಂಒ) ಹೇಳಿಕೆಯಲ್ಲಿ ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!