ಉದಯವಾಹಿನಿ, ಬೆಂಗಳೂರು: ಕನ್ನಡ ಜ್ಞಾನ ದಾಸೋಹಿ, ಪುಸ್ತಕ ಭಂಡಾರ ಸೃಷ್ಟಿಸಿದ ಮಂಡ್ಯ ಜಿಲ್ಲೆಯ ಅಂಕೇಗೌಡ ಅವರು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 2026 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನ ಘೋಷಣೆ ಮಾಡಲಾಗಿದೆ. ಮಂಡ್ಯ ) ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು, ದೊಡ್ಡ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ. ಪಾಂಡವಪುರದಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಹರಳಹಳ್ಳಿಯಲ್ಲಿ ಪುಸ್ತಕದ ಮನೆ ನಿರ್ಮಾಣ ಮಾಡಿದ್ದು, ಇಲ್ಲಿ ಲಕ್ಷಗಟ್ಟಲೆ ಪುಸ್ತಕಗಳ ಸಂಗ್ರಹವಿದೆ. ಒಂದೊಂದೇ ಪುಸ್ತಕ ಸಂಗ್ರಹ ಮಾಡುತ್ತಾ ದೊಡ್ಡ ಸಂಗ್ರಹಾಲಯವನ್ನೇ ತೆರೆದಿದ್ದಾರೆ. ಇಲ್ಲಿಗೆ ಯಾರೇ ಬಂದರೂ, ಯಾವುದೇ ವಿಷಯದ ಪುಸ್ತಕಗಳನ್ನ ನೋಡಬಹುದು, ಓದಬಹುದು. ವಿಶ್ವದ ಎಲ್ಲಾ ಪ್ರಮುಖ ಗ್ರಂಥಗಳು ಒಂದೇ ಸೂರಿನಡಿ ಓದಲು ಸಿಗುವುದು ಈ ಪುಸ್ತಕ ಮನೆಯ ವಿಶೇಷ.

ಅಂಕೇಗೌಡರ ಪುಸ್ತಕ ಪ್ರೀತಿಗೆ ಕಾರಣವಾಗಿದ್ದು ಶಾಲಾ ಗ್ರಂಥಾಲಯ. ಶಾಲಾ ದಿನಗಳಲ್ಲಿ ಪುಸ್ತಕಕ್ಕಾಗಿ ಗ್ರಂಥಾಲಯಕ್ಕೆ ಹೋದ ಅಂಕೇಗೌಡರಿಗೆ ಶಿಕ್ಷಕರು ಹೇಳಿದ ಆ ಮಾತು. ಇಂದು ವಿಶ್ವದ ದೊಡ್ಡ ಖಾಸಗಿ ಗ್ರಂಥಾಲಯ ನಿರ್ಮಾಣಕ್ಕೆ ಕಾರಣವಾಗಿದೆ. ಶಾಲಾ ದಿನಗಳಲ್ಲಿ ಪುಸ್ತಕಗಳನ್ನ ಮನೆಗೆ ಕೊಡದ ಹಿನ್ನೆಲೆ, ಪುಸ್ತಕ ಸಂಗ್ರಹ ಹಾಗೂ ಖರೀದಿಗೆ ಮುಂದಾದ ಅಂಕೇಗೌಡರು, ಇಂದು ದೊಡ್ಡ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ.

ಈಗಾಗಲೇ ಈ ಪುಸ್ತಕದ ಮನೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿಕೊಂಡಿದ್ದು, ಪ್ರತಿಯೊಂದು ಪುಸ್ತಕವೂ ಮೌಲ್ಯಯುತವಾಗಿವೆ.‌ ಸಣ್ಣ ಕಟ್ಟಡದಲ್ಲೇ ಮೊದ ಮೊದಲು ಪುಸ್ತಕ ಮನೆಯನ್ನ ಆರಂಭಿಸಲಾಗಿತ್ತು. ಈಗ ಉದ್ಯಮಿ ಹರಿಕೋಡೆ ಕಟ್ಟಿಕೊಟ್ಟ ಕಟ್ಟಡ ಈ ಮನೆಗೆ ಮತ್ತೊಂದು ಆಯಾಮ ನೀಡಿದೆ. ಅಂಕೇಗೌಡರ ಈ ದೊಡ್ಡ ಸಾಧನೆಗೆ ಅವರ ಪತ್ನಿಯ ಸಹಕಾರವೂ ಇದೆ. ಪುಸ್ತಕಗಳ ಜೋಡಿಸುವಿಕೆಯಿಂದ ಹಿಡಿದು ಸ್ವಚ್ಛತಾ ಕಾರ್ಯದಲ್ಲೂ ಕೈಜೋಡಿಸಿ ಪತಿಯ ಕಾರ್ಯಕ್ಕೆ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ. ಒಮ್ಮೆ ಈ ಪುಸ್ತಕದ ಮನೆಗೆ ನೀವು ಕಾಲಿಟ್ಟರೆ ಸಾಕು ಪುಸ್ತಕ ಲೋಕವೇ ನಿಮ್ಮ ಕಣ್ಣ ಮುಂದೆ ಬಂದು ಬಿಡುತ್ತದೆ. ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಪಾಂಡವಪುರ-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಹೋದರೆ ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯಲಿದೆ ಈ ಪುಸ್ತಕದ ಮನೆ.

Leave a Reply

Your email address will not be published. Required fields are marked *

error: Content is protected !!