ಉದಯವಾಹಿನಿ, ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ ಸಮರ ಸಾರಿದ್ದ ಬೆಂಗಳೂರು ಸಂಚಾರ ಪೊಲೀಸರು ಈಗ ಏಕಮುಖ ಸಂಚಾರ ಮಾಡುತ್ತಿರುವ ವಾಹನ ಸವಾರರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆಗೆ ಇಳಿದಿದ್ದಾರೆ. ಹೌದು. ಕೇವಲ ನಾಲ್ಕು ದಿನದಲ್ಲಿ ಸಂಚಾರಿ ಪೊಲೀಸರು 11,498 ಕೇಸ್ ದಾಖಲಿದ್ದಾರೆ. ಜ.21 ರಿಂದ 24 ರವರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಏಕಮುಖ ಸಂಚಾರದಿಂದ ವಾಹನ ದಟ್ಟಣೆ, ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಪ್ರಯಾಣಿಕರು ಸಂಚಾರ ಪೊಲೀಸರಿಗೆ ದೂರು ನೀಡುತ್ತಿದ್ದರು. ಅಷ್ಟೇ ಅಲ್ಲದೇ ಕಾರಿನ ಡ್ಯಾಶ್‌ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ಅಪ್ಲೋಡ್ ಮಾಡಿ ದೂರು ಸಲ್ಲಿಸುತ್ತಿದ್ದರು.
ದಿನೇ ದಿನೇ ಒನ್‌ವೇ ಸವಾರರ ಕಿರಿಕಿರಿ ಜಾಸ್ತಿಯಾಗುತ್ತಿದ್ದಂತೆ ಪೊಲೀಸರು ಈಗ ಕಾರ್ಯಾಚರಣೆಗೆ ಇಳಿದಿದ್ದಾರೆ. ಒನ್ ವೇ ಸಂಚಾರದ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದವರೆಯುತ್ತದೆ ಎಂದು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
