ಉದಯವಾಹಿನಿ, ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿರುವ ನಡುವೆ ಗ್ಯಾರೇಜ್‌ನಲ್ಲಿ ಬೆಂಕಿ ಹೊತ್ತಿಕೊಂಡು ನಿದ್ರೆಯಲ್ಲಿದ್ದ ಹಿಂದೂ ಯುವಕ ಸಜೀವ ದಹನವಾಗಿರುವ ಘಟನೆ ಶುಕ್ರವಾರ ರಾತ್ರಿ ನರಸಿಂಗ್ಡಿ ಎಂಬಲ್ಲಿ ನಡೆದಿದೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು ಚಂಚಲ್ ಭೌಮಿಕ್(25) ಎಂದು ಗುರುತಿಸಲಾಗಿದೆ.
ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಯುವಕ ಮಲಗಿದ್ದ. ಅದೇ ಸಂದರ್ಭದಲ್ಲಿ ಅಲ್ಲೊಬ್ಬ ಅಪರಿಚಿತ ವ್ಯಕ್ತಿ ಓಡಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.
ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ. ಯಾರಾದರೂ ಬೆಂಕಿ ಹೊತ್ತಿಸಿದ್ದಾರಾ? ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆಯೇ ಎಂಬುದನ್ನು ತನಿಖೆ ಮಾಡುತ್ತಿದ್ದೇವೆ ಎಂದು ನರಸಿಂಗ್ಡಿಯ ಎಸ್‌ಪಿ ಅಬ್ದುಲ್ಲಾ ಅಲ್ ಫಾರೂಕ್ ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರು ಗ್ಯಾರೇಜ್‌ನ ಶಟರ್ ಮುರಿದು ಒಳಹೋಗಿ ನೋಡಿದಾಗ ಯುವಕನ ದೇಹ ಸುಟ್ಟು ಕರಕಲಾಗಿತ್ತು. ಈ ಘಟನೆ ಸಂಬಂಧ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದರು.
ಫೆಬ್ರವರಿ 12ರಂದು ನಿಗದಿಯಾಗಿರುವ ಸಂಸತ್ ಚುನಾವಣೆಗಳು ಸಮೀಪಿಸುತ್ತಿರುವಂತೆ ಬಾಂಗ್ಲಾದಲ್ಲಿ ಅಸ್ಥಿರತೆ ಮತ್ತು ಕೋಮು ಉದ್ವಿಗ್ನತೆ ಹೆಚ್ಚಾಗುತ್ತಿದೆ. ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧ ಮತ್ತು ಹೆಚ್ಚುತ್ತಿರುವ ಅಲ್ಪಸಂಖ್ಯಾತ ಹಿಂದೂಗಳ ಹತ್ಯೆ ತೀವ್ರ ಕಳವಳ ಉಂಟುಮಾಡುತ್ತಿದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಆಗಸ್ಟ್ 2024ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಅಲ್ಪಸಂಖ್ಯಾತರವನ್ನು ಗುರಿಯಾಗಿಸಿಕೊಂಡು ನಡೆಸುವ ಹಿಂಸಾಚಾರದಲ್ಲಿ ತೀವ್ರ ಏರಿಕೆಯಾಗಿರುವುದು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಸರ್ಕಾರಿ ಸಂಸ್ಥೆಗಳ ವರದಿಗಳಿಂದ ಗೊತ್ತಾಗುತ್ತದೆ.
ಆಗಸ್ಟ್ 2024ರಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭಾರತಕ್ಕೆ ಪಲಾಯನ ಮಾಡಿ ಆಶ್ರಯ ಪಡೆದುಕೊಂಡಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು ಟೀಕಿಸುತ್ತಾ, ಬಾಂಗ್ಲಾ ಭಯೋತ್ಪಾದನೆಯ ಯುಗಕ್ಕೆ ಧುಮುಕಿದೆ ಮತ್ತು ದೇಶದ ಸಂಪನ್ಮೂಲಗಳನ್ನು ವಿದೇಶಿ ಹಿತಾಸಕ್ತಿಗಳಿಗೆ ವಿನಿಮಯ ಮಾಡಿಕೊಳ್ಳಲು ಪಿತೂರಿ ನಡೆಯುತ್ತಿದೆ ಎಂದಿದ್ದಾರೆ. ಇದೇ ವೇಳೆ, ಯೂನಸ್ ಆಡಳಿತವನ್ನು ಉರುಳಿಸಲು ದೇಶದ ಜನರಿಗೆ ಕರೆ ನೀಡಿದ್ದಾರೆ.
