ಉದಯವಾಹಿನಿ, ಜಿನೀವಾ : ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯಲು ವಾಷಿಂಗ್ಟನ್ ಹೇಳಿರುವ ಕಾರಣಗಳನ್ನು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ತಳ್ಳಿಹಾಕಿದ್ದಾರೆ. WHO ಮೇಲಿನ ಅಮೆರಿಕದ ಟೀಕೆಯನ್ನು “ಸುಳ್ಳು” ಎಂದು ಹೇಳಿದ್ದಾರೆ.
WHOನಿಂದ ಔಪಚಾರಿಕವಾಗಿ ಹಿಂದೆ ಸರಿದಿರುವ ಅಮೆರಿಕದ ಈ ವಾರದ ಘೋಷಣೆಯು “ಅಮೆರಿಕ ಮತ್ತು ಜಗತ್ತು ಎರಡನ್ನೂ ಕಡಿಮೆ ಸುರಕ್ಷಿತವಾಗಿಸುತ್ತದೆ” ಎಂದು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ. ಈ ಕುರಿತು ಎಕ್ಸ್​​ ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ದುರದೃಷ್ಟವಶಾತ್, WHO ನಿಂದ ಹಿಂದೆ ಸರಿಯುವ US ನಿರ್ಧಾರಕ್ಕೆ ಉಲ್ಲೇಖಿಸಲಾದ ಕಾರಣಗಳು ಸುಳ್ಳು, WHO ಯಾವಾಗಲೂ US ಮತ್ತು ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ಅವರ ಸಾರ್ವಭೌಮತ್ವಕ್ಕೆ ಸಂಪೂರ್ಣ ಗೌರವವನ್ನು ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಅಮೆರಿಕದ ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ಅವರು ಗುರುವಾರ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ‘ವಾಷಿಂಗ್ಟನ್ WHO ನಿಂದ ಅಧಿಕೃತವಾಗಿ ಹಿಂದೆ ಸರಿದಿದೆ’ ಎಂದು ಘೋಷಿಸಿದ್ದರು.
ಅಲ್ಲದೇ, WHO ಸಂಸ್ಥೆಯು ‘ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹಲವಾರು ವೈಫಲ್ಯಗಳನ್ನು ಮತ್ತು ಯುನೈಟೆಡ್ ಸ್ಟೇಟ್ಸ್‌ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಪದೇ ಪದೆ ವರ್ತಿಸುತ್ತಿದೆ’ ಎಂದು ಆರೋಪಿಸಿದ್ದಾರೆ. ಕಸ ಮತ್ತು ಕಳಂಕಿತ : WHO ಸಂಸ್ಥೆಯು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಕಸದ ಬುಟ್ಟಿಗೆ ಎಸೆದು ಕಳಂಕಿತಗೊಳಿಸಿದೆ. ಅದರ ಸ್ವಾತಂತ್ರ್ಯವನ್ನು ರಾಜಿ ಮಾಡಿಕೊಂಡಿದೆ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆಯು, ‘ನಾವು ಪ್ರತಿಯೊಂದು ಸದಸ್ಯ ರಾಷ್ಟ್ರದವರಂತೆಯೇ, ಅಮೆರಿಕದೊಂದಿಗೂ ಉತ್ತಮ ನಂಬಿಕೆಯಿಂದ ತೊಡಗಿಸಿಕೊಳ್ಳಲು ಪ್ರಯತ್ನಿಸಿದ್ದೇವೆ’ ಎಂದಿದೆ. ‘ತನ್ನ ಕೋವಿಡ್ ಪ್ರತಿಕ್ರಿಯೆಯು ಅಮೆರಿಕನ್ನರ ಜೀವಗಳನ್ನು ಉಳಿಸಬಹುದಾದ ನಿರ್ಣಾಯಕ ಮಾಹಿತಿಯ ಸಕಾಲಿಕ ಮತ್ತು ನಿಖರವಾದ ಹಂಚಿಕೆಯನ್ನು ತಡೆಯಿತು. ನಂತರ ಆ ವೈಫಲ್ಯಗಳನ್ನು ಮರೆಮಾಡಿದೆ” ಎಂಬ ರೂಬಿಯೊ ಮತ್ತು ಕೆನಡಿಯವರ ಆರೋಪವನ್ನು ಸಂಸ್ಥೆ ತೀವ್ರವಾಗಿ ತಿರಸ್ಕರಿಸಿತು.

Leave a Reply

Your email address will not be published. Required fields are marked *

error: Content is protected !!