ಉದಯವಾಹಿನಿ, ಸೋಷಿಯಲ್‌ ಮೀಡಿಯಾಗಳ ಮೂಲಕ ಸದ್ದು ಮಾಡಿದ್ದ ಜೋಡಿಯ ನೈಜ ಪ್ರೇಮಕಥೆಯನ್ನಾಧರಿಸಿದ ‘ಲವ್ ಯೂ ಮುದ್ದು’ ಸಿನಿಮಾ ಈಗ ಒಟಿಟಿಗೆ ಬಂದಿದೆ. ಕಳೆದ ವರ್ಷ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಈ ಚಿತ್ರವನ್ನ ನೋಡಿ ʻಹ್ಯಾಟ್ರಿಕ್ ಹೀರೋʼ ಶಿವರಾಜ್ ​​ಕುಮಾರ್ ಕೂಡ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.ಹೌದು. ಕಳೆದ ವರ್ಷ ಸಮ್ಮೋಹಕ ಗೆಲುವುಗಳ ಸಾಲಿನಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಕುಮಾರ್ ನಿರ್ದೇಶನದ ‘ಲವ್ ಯೂ ಮುದ್ದು’ ಚಿತ್ರವೂ ಸೇರಿಕೊಂಡಿದೆ. ಪ್ರೇಮಿಗಳ ನೈಜ ಕಥೆಯನ್ನಾಧರಿಸಿ ಈ ಸಿನಿಮಾ ರೂಪುಗೊಂಡಿತ್ತು. ಭಾಷೆ, ಗಡಿ ಮೀರಿ ಈ ಕಥನ ಕರುನಾಡ ಸಿನಿ ಪ್ರೇಮಿಗಳ ಮನ ಗೆದ್ದಿತ್ತು. ಇದೀಗ ಅಮೇಜಾನ್ ಪ್ರೈಮ್‌ನಲ್ಲಿಯೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರೈಮ್‌ನಲ್ಲಿ ಈ ಸಿನಿಮಾ ನೋಡಿ ಹ್ಯಾಟ್ರಿಕ್ ಹೀರೋ ಶಿವಣ್ಣ ಮೆಚ್ಚಿಕೊಂಡಿದ್ದಾರೆ.

ಸದಾ ಒಳ್ಳೆಯ ಕನ್ನಡ ಸಿನಿಮಾಗಳನ್ನ ಬೆಂಬಲಿಸುತ್ತಾ, ಸಿನಿಮಾ ತಂಡದ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾ ಬರುತ್ತಿರುವವರು ಶಿವರಾಜ್‌ಕುಮಾರ್‌ ಅವರು ʻಲವ್ ಯೂ ಮುದ್ದುʼ ಚಿತ್ರವನ್ನ ನೋಡಿ, ನಾಯಕ ಸಿದ್ದು ಅವರಿಗೆ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡದ ಸಮೇತ ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ. ಇದರಿಂದ ಖುಷಿಗೊಂಡ ಸಿದ್ದು ಮೂಲಿಮನಿ, ರೇಷ್ಮಾ, ಕುಮಾರ್, ನಿರ್ಮಾಪಕ ನರಸಿಂಹ ಮೂರ್ತಿ, ವಿತರಕ ಜಗದೀಶ್ ಗೌಡ ಸೇರಿದಂತೆ ತಮ್ಮ ತಂಡದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಶಿವಣ್ಣನನ್ನ ಭೇಟಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!