ಉದಯವಾಹಿನಿ, ಕೋಲಾರ: ಭಾರತ ಸರ್ಕಾರದ ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತು ಹಾಗೂ ಸಂಸ್ಕೃತಿ ಸಚಿವಾಲಯದ ಸಂಸ್ಥೆಯಾದ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಸರ್ಕಾರಿ ಶಾಲಾ ಮಕ್ಕಳಲ್ಲಿ ಪ್ರಾಯೋಗಿಕ ಜ್ಞಾನ ಹೆಚ್ಚಿಸುವ ಸದುದ್ದೇಶದಿಂದ ಸಂಚಾರಿ ವಿಜ್ಞಾನ ಬಸ್‌ಅನ್ನು ಜಿಲ್ಲೆಯ ೧೪ ಶಾಲೆಗಳಿಗೆ ಕಳುಹಿಸಿಕೊಟ್ಟಿದೆ ಎಂದು ಸಂಸ್ಥೆಯ ತಂತ್ರಜ್ಞ ಸಿದ್ದಲಿಂಗ ತಿಳಿಸಿದರು.  ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅನೇಕ ವಿಜ್ಞಾನ ಪ್ರಯೋಗಗಳ ಚಾಲಿತ ಮಾಡೆಲ್‌ಗಳನ್ನು ಹೊಂದಿದ ‘ಸಂಚಾರಿ ವಿಜ್ಞಾನ ಬಸ್ ಮೂಲಕ ಮಕ್ಕಳಿಗೆ ಪ್ರಾಯೋಗಿಕ ಅರಿವು ಮೂಡಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ೧೪ ಸರ್ಕಾರಿ ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಪ್ರತಿ ಶಾಲೆಯಲ್ಲೂ ಎರಡೆರಡು ದಿನ ೮, ೯ ಮತ್ತು ೧೦ನೇ ತರಗತಿ ಮಕ್ಕಳಿಗೆ ಪಠ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಜ್ಞಾನದ ಪ್ರಯೋಗಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳಲ್ಲಿ ಕಲಿಕೆಗೆ ಕಾತರವುಂಟು ಮಾಡುವ ಪ್ರಯತ್ನ ನಡೆಸಿದೆ ಎಂದು ತಿಳಿಸಿದರು.
ವಿಜ್ಞಾನ ತಾತ್ವಿಕ ಬೋಧನೆಗಿಂತ ಪ್ರಯೋಗಗಳ ಮೂಲಕ ಅರಿತಾಗ ಮಕ್ಕಳ ಮನದಲ್ಲಿ ಅಚ್ಚಳಿಯದೇ ಉಳಿಯಲು ಹೆಚ್ಚು ಸಹಕಾರಿ ಎಂದ ಅವರು, ವಿಜ್ಞಾನ ಮತ್ತು ಗಣಿತ ಕಬ್ಬಿಣದ ಕಡಲೆಯಲ್ಲ, ಅತಿ ಇಷ್ಟಪಟ್ಟು ಕಲಿಯುವ ಪಠ್ಯ ಎಂಬ ಭಾವನೆ ಮಕ್ಕಳಲ್ಲಿ ಬಲಗೊಳಿಸುವ ಪ್ರಯತ್ನ ಇದರಿಂದ ಸಾಧ್ಯವಾಗುತ್ತಿದೆ ಎಂದು ತಿಳಿಸಿದರು. ಸಂಚಾರಿ ವಿಜ್ಞಾನ ಬಸ್ಸಿನ ಮೇಲ್ವಿಚಾರಕ ಹಾಗೂ ಶಿಕ್ಷಣ ಸಂಪನ್ಮೂಲ ವ್ಯಕ್ತಿ ವೀರೇಶ್ ಭಂಡಾರಿ, ಭಾರತ ಸರ್ಕಾರದ ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಾಯಗಳ ಪರಿಷತ್ತು ಆಯೋಜಿಸಿರುವ ವಿಜ್ಞಾನ ಕೌತುಕಗಳಗೊಂಡ ಸಂಚಾರಿ ವಿಜ್ಞಾನ ಬಸ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾತರದಿಂದ ಕಲಿಯಲು ಆಕರ್ಷಿಸುವ ಕೌತುಕಗಳ ಸಂಪದ್ಬರಿತ ಸಂಪನ್ಮೂಲಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!