ಉದಯವಾಹಿನಿ, ಅಮರಾವತಿ: ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದ ಬಳಿ ಭದ್ರತಾ ತಪಾಸಣೆ ವೇಳೆ ಮಹಾರಾಷ್ಟ್ರ ನೋಂದಣಿಯ ಕಿಯಾ ಕಾರಿನಲ್ಲಿ 30 ಲಕ್ಷ ರೂ. ಹಣ ಪತ್ತೆಯಾಗಿದೆ. ಮಹಾ ಶಿವರಾತ್ರಿ ಬ್ರಹ್ಮೋತ್ಸವದ ಸಿದ್ಧತೆಗಾಗಿ ಶ್ರೀಶೈಲಂಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ಬರುತ್ತಿದ್ದಾರೆ. ಇದರಿಂದ ಭದ್ರತಾ ದೃಷ್ಟಿಯಿಂದ ವಾಹನ ತಪಾಸಣೆ ಹೆಚ್ಚಿಸಲಾಗಿದೆ. ಹೀಗೆ ತಪಾಸಣೆ ನಡೆಸುವಾಗ ಮುಖ್ಯ ಭದ್ರತಾ ಅಧಿಕಾರಿ ಶ್ರೀನಿವಾಸ ರಾವ್ ಮತ್ತು ಅವರ ತಂಡವು ಕಾರನ್ನು ತಡೆದು ತಪಾಸಣೆ ನಡೆಸಿತು. ಈ ವೇಳೆ ಭದ್ರತಾ ಸಿಬ್ಬಂದಿಗೆ ಹಣ ತುಂಬಿದ್ದ ಚೀಲ ಸಿಕ್ಕಿದೆ.
ಹಣದ ಬಗ್ಗೆ ಪ್ರಶ್ನಿಸಿದಾಗ ಚಾಲಕ ಮತ್ತು ಪ್ರಯಾಣಿಕರು ತಮ್ಮದು ಚಿನ್ನದ ವ್ಯವಹಾರ ಇದೆ. ದೇವರ ದರ್ಶನಕ್ಕಾಗಿ ಶ್ರೀಶೈಲಂಗೆ ಬಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಹಣದ ಮೂಲದ ಬಗ್ಗೆ ದಾಖಲೆ ಹಾಗೂ ವಿವರಣೆ ನೀಡಲು ಅವರು ವಿಫಲರಾಗಿದ್ದಾರೆ. ಈ ಬಗ್ಗೆ ಭದ್ರತಾ ಸಿಬ್ಬಂದಿ ಶ್ರೀಶೈಲಂ ಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಾರು ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ. ಹಣದ ಮೂಲ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೇ ಇಷ್ಟೊಂದು ಪ್ರಮಾಣದ ಹಣ ಸಾಗಿಸಲಾಗಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ, ಆದಾಯ ತೆರಿಗೆ ನಿಯಮಗಳು ಅಥವಾ ಇತರೆ ಕಾನೂನು ಉಲ್ಲಂಘನೆಯಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
