ಉದಯವಾಹಿನಿ, ಜೈಪುರ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ರಾಜಸ್ಥಾನದ ಗಡಿ ಜಿಲ್ಲೆ ಜೈಸಲ್ಮೇರ್‌ನ ವ್ಯಕ್ತಿಯನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 25ರ ತಡರಾತ್ರಿ ವಿಶೇಷ ಭದ್ರತಾ ತಂಡವು ನೆಹ್ದಾನ್ ಗ್ರಾಮದಲ್ಲಿರುವ ಶಂಕಿತ ಝಬರರಾಮ್‌ ಮೇಘವಾಲ್‌ ಎಂಬಾತನನ್ನು ಬಂಧಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಗಡಿ ಪ್ರದೇಶದಲ್ಲಿ ಇ-ಮಿತ್ರ ಕೇಂದ್ರವನ್ನು ಈತ ನಡೆಸುತ್ತಿದ್ದ. ಪಾಕಿಸ್ತಾನಿ ಮಹಿಳಾ ನಿರ್ವಾಹಕಿಯೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹನಿಟ್ರ್ಯಾಪ್ ಮಾಡಿ ಬೇಹುಗಾರಿಕೆಗೆ ಬಳಸಿಕೊಂಡಿರುವ ಅನುಮಾನಗಳು ವ್ಯಕ್ತವಾಗಿವೆ.
ಸಿಐಡಿ (ಗುಪ್ತಚರ) ತಂಡಗಳು ಮೇಘವಾಲ್‌ನನ್ನು ವಿಚಾರಣೆಗಾಗಿ ಜೈಪುರಕ್ಕೆ ಕರೆದೊಯ್ದಿವೆ. ಆತನ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆತ ಕಳೆದ ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ಇ-ಮಿತ್ರ ಕೇಂದ್ರವನ್ನು ನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಂಕಿತನಿಗೆ ಸರ್ಕಾರಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳು ಮತ್ತು ದಾಖಲೆಗಳ ಮಾಹಿತಿ ಲಭ್ಯವಿತ್ತು. ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನಿ ನಿರ್ವಾಹಕನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಂಬ ಅನುಮಾನವಿದೆ.

Leave a Reply

Your email address will not be published. Required fields are marked *

error: Content is protected !!