ಉದಯವಾಹಿನಿ, ಮನಿಲಾ (ದಕ್ಷಿಣ ಫಿಲಿಪ್ಪೀನ್ಸ್ ): 350ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿವೊಂದು ಸೋಮವಾರ ಬೆಳಗ್ಗೆ ದಕ್ಷಿಣ ಫಿಲಿಪ್ಪೀನ್ಸ್ ಬಿರುಗಾಳಿ ಸಮುದ್ರದಲ್ಲಿ ಮುಳುಗಿದೆ. ಪರಿಣಾಮ 18 ಜನರು ಮೃತಪಟ್ಟು 24 ಜನರು ಕಾಣೆಯಾಗಿದ್ದಾರೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.
“ಫಿಲಿಪ್ಪೀನ್ಸ್ನ ಮಿಂಡಾನಾವೊದ ನೈಋತ್ಯ ತುದಿಯಲ್ಲಿರುವ ಜಾಂಬೊಂಗಾ ನಗರ ಬಂದರಿನಿಂದ ಸುಮಾರು 342 ಜನ ಪ್ರಯಾಣಿಕರೊಂದಿಗೆ ಸಾಗಿದ್ದ M/V ಟ್ರಿಶಾ ಕೆರ್ಸ್ಟಿನ್ 3 ಫೆರ್ರಿ ಎಂಬ ದೋಣಿಯು ಅಲ್ಲಿಂದ ಹೊರಟು ಜಲೋ ದ್ವೀಪಕ್ಕೆ ತಲುಪಬೇಕಿತ್ತು. ಆದರೆ, ಫೆರ್ರಿ ದೋಣಿಯು ಜಾಂಬೊಂಗಾ ನಗರ ಬಂದರಿನಿಂದ ಹೊರಟ ಸುಮಾರು 4 ಗಂಟೆಗಳ ಬಳಿಕ ಮಧ್ಯರಾತ್ರಿ ಸುಮಾರು 1:50ರ ಸುಮಾರಿಗೆ (1750 GMT ಭಾನುವಾರ) ಅಪಾಯದ ಸಂಕೇತವನ್ನು ಸೂಚಿಸಿದ್ದು, ಇದ್ದಕ್ಕಿದ್ದಂತೆ ಮುಳುಗಿದೆ” ಎಂದು ಕರಾವಳಿ ಕಾವಲು ಪಡೆ ಹೇಳಿಕೆಯಲ್ಲಿ ತಿಳಿಸಿದೆ.”342 ಪ್ರಯಾಣಿಕರ ಪೈಕಿ ಸದ್ಯ 18 ಮಂದಿ ಮೃತಪಟ್ಟ ಬಗ್ಗೆ ಮಾಹಿತಿ ಇದ್ದು, 24 ಜನರು ಕಾಣೆಯಾಗಿದ್ದಾರೆ. 316 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆಗೆ ಸಹಾಯ ಮಾಡಲು ಕರಾವಳಿ ಕಾವಲು ವಿಮಾನವೂ ಬಂದಿದೆ. ನೌಕಾಪಡೆ ಮತ್ತು ವಾಯುಪಡೆ ಕೂಡ ತಮ್ಮ ಸ್ವತ್ತುಗಳನ್ನು ಕಳುಹಿಸಿದೆ ಎಂದು ದಕ್ಷಿಣ ಮಿಂಡಾನಾವೊದಲ್ಲಿ ನೆಲೆಸಿರುವ ಕರಾವಳಿ ಕಾವಲು ಪಡೆ ಕಮಾಂಡರ್ ರೋಮೆಲ್ ದುವಾ ತಿಳಿಸಿದ್ದಾರೆ. 44 ಮೀಟರ್ (144 ಅಡಿ) ಉದ್ದದ ಈ ಟ್ರಿಪಲ್ ಡೆಕ್ಕರ್ ಹಡಗು, ಜಾಂಬೊಂಗಾ ಪರ್ಯಾಯ ದ್ವೀಪದ ಬೆಸಿಲಾನ್ ಪ್ರಾಂತ್ಯದ ದ್ವೀಪಗಳ ಸರಪಳಿಯ ಭಾಗವಾಗಿರುವ ಬಲುಕ್ – ಬಲುಕ್ ದ್ವೀಪದಿಂದ ಸುಮಾರು ಐದು ಕಿಲೋಮೀಟರ್ ಪೂರ್ವಕ್ಕೆ ಮುಳುಗಿದೆ.
