ಉದಯವಾಹಿನಿ, ಟೆಹ್ರಾನ್ : ತನ್ನ ಜಲಪ್ರದೇಶದ ಬಳಿ ವಿದೇಶಿ ಯುದ್ಧನೌಕೆಗಳ ಆಗಮನವು ದೇಶದ ರಕ್ಷಣಾ ನಿಲುವು ಮತ್ತು ರಾಜತಾಂತ್ರಿಕತೆಯ ವಿಧಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇರಾನ್ ಸೋಮವಾರ ಹೇಳಿದ್ದು, ಭಿತ್ತಿಚಿತ್ರದ ಮೂಲಕ ಅಮೆರಿಕಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಅಮೆರಿಕಾದ ಯುಎಸ್‌ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಮತ್ತು ಅದರೊಂದಿಗೆ ಇತರ ಯುದ್ಧನೌಕೆಗಳು ಮಧ್ಯಪ್ರಾಚ್ಯವನ್ನು ತಲುಪಿದ್ದು, ಇರಾನ್ ಸಮೀಪ ಕಾರ್ಯನಿರ್ವಹಿಸುತ್ತಿವೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಇರಾನಿನ ವಿದೇಶಾಂಗ ಸಚಿವಾಲಯ, ‘ಮಾತುಕತೆಗೆ ಬಾಗಿಲು ತೆರೆದಿರುವಂತೆಯೇ ದೇಶವನ್ನು ರಕ್ಷಿಸಿಕೊಳ್ಳಲು ನಮ್ಮ ಪಡೆಗಳು ಬದ್ಧವಾಗಿವೆ. ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಯಾವತ್ತೂ ಯುದ್ಧವನ್ನು ಸ್ವಾಗತಿಸಿಲ್ಲ ಮತ್ತು ಯಾವತ್ತೂ ರಾಜತಾಂತ್ರಿಕತೆ ಹಾಗೂ ಮಾತುಕತೆಯಿಂದ ವಿಮುಖವಾಗಿಲ್ಲ. ಕಾರ್ಯರೂಪದಲ್ಲಿಯೇ ತೋರಿಸಿದ್ದೇವೆ’ ಎಂದು ಹೇಳಿದೆ.
