ಉದಯವಾಹಿನಿ, ಟೆಲ್‌ಅವೀವ್: ಗಾಝಾ ಪಟ್ಟಿಯಲ್ಲಿ ಬಂಧಿತರಾಗಿದ್ದ ಕೊನೆಯ ಒತ್ತೆಯಾಳುವಿನ ಶವವನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ಸೇನೆ ಸೋಮವಾರ ತಿಳಿಸಿದೆ ಎಂದು aljazeera.com ವರದಿ ಮಾಡಿದೆ.
ಇಸ್ರೇಲ್ ಪೊಲೀಸರು ಹಾಗೂ ಮಿಲಿಟರಿ ರಬ್ಬಿನೇಟ್ ಸಹಕಾರದೊಂದಿಗೆ ರಾಷ್ಟ್ರೀಯ ವಿಧಿವಿಜ್ಞಾನ ವೈದ್ಯಕೀಯ ಕೇಂದ್ರವು ಗುರುತಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಬಳಿಕ ದಿವಂಗತ ರಾನ್ ಗ್ವಿಲಿಯ ದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಸೇನಾ ವಕ್ತಾರ ಅವಿಚೇ ಅಡೇ ತಿಳಿಸಿದ್ದಾರೆ.
ಗಾಝಾ ಪಟ್ಟಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಈ ಅವಶೇಷಗಳು ಪತ್ತೆಯಾಗಿವೆ. ಈ ಮೂಲಕ ಗಾಝಾ ಪಟ್ಟಿಯಲ್ಲಿ ಬಂಧಿತರಾಗಿದ್ದ ಎಲ್ಲಾ ಒತ್ತೆಯಾಳುಗಳನ್ನು ವಾಪಸ್ ತರಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
