ಉದಯವಾಹಿನಿ, ತೆಲಂಗಾಣ: ಬಸ್ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡರೂ ಲೆಕ್ಕಿಸದೇ ಪ್ರಯಾಣಿಕರ ರಕ್ಷಣೆಗಾಗಿ ಬಸ್ ನಿಲ್ಲಿಸಿ ಸಮಯ ಪ್ರಜ್ಞೆ ಮೆರೆದ ಚಾಲಕ, ಬಳಿಕ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಪ್ರಾಣಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಚೌಟುಪ್ಪಲ್‌ನಲ್ಲಿ ನಡೆದಿದೆ. ವಿಜಯವಾಡ ಬಸ್ ಡಿಪೋದ ಚಾಲಕನಾಗಿರುವ ವಿಜಯವಾಡದ ತಾಡಿಗಡಪ ವಸಂತ ನಗರ ಕಟ್ಟದ ನಾಗರಾಜು (38) ಹೃದಯಾಘಾತದಿಂದ ಮೃತಪಟ್ಟವರು.
ಪೊಲೀಸರ ಪ್ರಕಾರ, ಚಾಲಕ ನಾಗರಾಜು ಅವರು ಭಾನುವಾರ ರಾತ್ರಿ ಎಪಿಎಸ್ಆರ್ಟಿಸಿ ಅಮರಾವತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (AP16 Z 0323) ಬಸ್ ಚಲಾಯಿಸಿಕೊಂಡು ಬಂದು ಸೋಮವಾರ ಬೆಳಗಿನ ಜಾವ ಹೈದರಾಬಾದ್ ತಲುಪಿದ್ದರು. ಬಳಿಕ ವಿಶ್ರಾಂತಿ ಪಡೆದ ನಂತರ, ಮಧ್ಯಾಹ್ನ 12.30ಕ್ಕೆ 18 ಪ್ರಯಾಣಿಕರೊಂದಿಗೆ ಹೈದರಾಬಾದ್‌ನ ಮಿಯಾಪುರ ಬಸ್ ನಿಲ್ದಾಣದಿಂದ ವಿಜಯವಾಡಕ್ಕೆ ಹೊರಟಿದ್ದರು.
ಅಬ್ದುಲ್ಲಾಪುರ್ಮೆಟ್ ತಲುಪಿದ ನಂತರ ಆಯಾಸವಾಗುತ್ತಿದೆ ಎಂದು ಹೇಳಿ ಬಸ್ ನಿಲ್ಲಿಸಿದ್ದ ನಾಗರಾಜು, ಮೆಡಿಕಲ್ ಶಾಪ್ವೊಂದರಲ್ಲಿ ಔಷಧಿಗಳನ್ನು ಖರೀದಿಸಿದ್ದರು. ಮಧ್ಯಾಹ್ನ 3.30ಕ್ಕೆ ಚೌಟುಪ್ಪಲ್ ಬಳಿ ಬರುತ್ತಿದ್ದಂತೆ ಎದೆ ನೋವಾಗುತ್ತಿದೆ ಎಂದು ಅಟೆಂಡರ್ ಚಂದ್ರಾರೆಡ್ಡಿಗೆ ಹೇಳಿ, ಬಸ್ ಅನ್ನು ಸರ್ವಿಸ್ ರಸ್ತೆ ಕಡೆ ತಿರುಗಿಸಿ ನಿಲ್ಲಿಸಿದ್ದರು. ಬಳಿಕ ಪ್ರಯಾಣಿಕರನ್ನು ಬೇರೆ ಬಸ್ನಲ್ಲಿ ಕಳುಹಿಸಿಕೊಡಲು ತಿಳಿಸಿದ್ದರು.
ನಾಗರಾಜು ಅವರು ಆಟೋ ಕರೆದು ತನ್ನ ಬಳಿ ಇದ್ದ ಹಣ ಕೊಟ್ಟು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದರು. ಆಟೋ ಚಾಲಕ ಶ್ರೀಶೈಲಂ ಮೊದಲು ಗಾಂಧಿ ಪಾರ್ಕ್ ಬಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಸಿಬ್ಬಂದಿ ವೈದ್ಯರಿಲ್ಲ ಎಂದು ತಿಳಿಸಿದರು. ನಂತರ ಅವರನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿನ ವೈದ್ಯರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ನೋಡುವುದಿಲ್ಲ ಎಂದಿದ್ದಾರೆ. ಆದ್ದರಿಂದ ನಾಗರಾಜು ಅವರನ್ನು ಅಲ್ಲಿಂದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ನಾಗರಾಜು ಅವರನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ನಾಗರಾಜು ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ. ಘಟನೆ ಸಂಬಂಧ ಚೌಟುಪ್ಪಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.