ಉದಯವಾಹಿನಿ, ಪುಣೆ(ಮಹಾರಾಷ್ಟ್ರ): ಬಾರಾಮತಿಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ತೆರಳುತ್ತಿದ್ದ ಖಾಸಗಿ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಅಜಿತ್ ಪವಾರ್ ಅವರೊಂದಿಗೆ ಅವರ ಭದ್ರತಾ ಸಿಬ್ಬಂದಿ ವಿಮಾನದಲ್ಲಿದ್ದು, ಯಾರೊಬ್ಬರು ಬದುಕುಳಿದಿಲ್ಲ ಎಂದು ಡಿಜಿಸಿಎ ತಿಳಿಸಿದೆ.
ಫೆ. 5ರಂದು ರಾಜ್ಯದಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ್ ಚುನಾವಣೆ ಪ್ರಚಾರದ ಭಾಗವಾಗಿ ಇಂದು ಬಾರಾಮತಿ ಜಿಲ್ಲೆಯಲ್ಲಿ ನಡೆಯಲಿದ್ದ ಹಲವು ಸಾರ್ವಜನಿಕ ರ‍್ಯಾಲಿಗಳಲ್ಲಿ ಮಾತನಾಡಲು ಉಪಮುಖ್ಯಮಂತ್ರಿ ಅಜಿತ್ ಪವಾರ್ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಅಷ್ಟರಲ್ಲಿ ಈ ಭೀಕರ ಅವಘಡ ಸಂಭವಿಸಿದೆ. ಬುಧವಾರ ಅವರು ನಾಲ್ಕು ರ‍್ಯಾಲಿಗಳಲ್ಲಿ ಭಾಗವಹಿಸುವವರಿದ್ದರು. ವಿಎಸ್ಆರ್ ಏವಿಯೇಷನ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ಲಿಯರ್‌ಜೆಟ್ – 45 ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಐದು ಜನರಿದ್ದರು. ಲಿಯರ್‌ಜೆಟ್ 45 ಬೊಂಬಾರ್ಡಿಯರ್ ಏರೋಸ್ಪೇಸ್‌ನ ಲಿಯರ್‌ಜೆಟ್ ವಿಭಾಗದಿಂದ ತಯಾರಿಸಲ್ಪಟ್ಟ ಮಧ್ಯಮ ಗಾತ್ರದ ವಾಣಿಜ್ಯ ಜೆಟ್ ವಿಮಾನವಾಗಿದೆ.
ಫ್ಲೈಟ್ ರಾಡಾರ್ ಪ್ರಕಾರ, ವಿಮಾನ ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟು 8.45ರ ಸುಮಾರಿಗೆ ರಾಡಾರ್‌ನಿಂದ ಕಣ್ಮರೆಯಾಗಿದೆ. ಬೆಳಗ್ಗೆ 8.50ರ ಸುಮಾರಿಗೆ ವಿಮಾನ ಅಪಘಾತಕ್ಕೀಡಾಗಿದೆ.”ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ಇಬ್ಬರು ಸಿಬ್ಬಂದಿ ಮತ್ತು ವಿಮಾನದ ಇಬ್ಬರು ಕ್ಯಾಪ್ಟನ್ಗಳು ಇದ್ದರು” ಎಂದು ಡಿಜಿಸಿಎ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಪೈಲಟ್‌ಗಳನ್ನು ಕ್ಯಾಪ್ಟನ್ ಸುಮಿತ್ ಕಪೂರ್ ಮತ್ತು ಕ್ಯಾಪ್ಟನ್ ಶಾಂಭವಿ ಪಾಠಕ್ ಎಂದು ಗುರುತಿಸಲಾಗಿದೆ. ವಿಮಾನವು ಇಳಿಯಲು ಪ್ರಯತ್ನಿಸುವ ಮೊದಲು ರನ್‌ವೇ ಬಳಿ ಸ್ಪಷ್ಟವಾದ ಗೋಚರತೆ ಇಲ್ಲದ ಕುರಿತು ಪೈಲಟ್ ಉಲ್ಲೇಖಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ವಿಮಾನದ ಅವಶೇಷಗಳು ಸುಡುತ್ತಿರುವ ದೃಶ್ಯಗಳಿದ್ದವು ವಿಡಿಯೋದಲ್ಲಿ ಸೆರೆಯಾಗಿವೆ. ಅಪಘಾತ ಸಂಭವಿಸಿದ ತಕ್ಷಣವೇ ರಕ್ಷಣಾ ತಂಡಗಳನ್ನು ನಿಯೋಜಿಸಲಾಯಿತು. ಸ್ಥಳೀಯರು ಸಹ ಸಹಾಯ ಮಾಡಲು ಧಾವಿಸಿದರು. ಆದರೆ ಸಂಪೂರ್ಣ ಬೆಂಕಿಯಿಂದ ಆವರಿಸಿದ್ದ ವಿಮಾನದ ಸಮೀಪ ಹೋಗಲು ಯಾರಿಗೂ ಸಾಧ್ಯವಾಗಿಲ್ಲ.
