ಉದಯವಾಹಿನಿ, ಕೋಲ್ಕತ್ತಾ: ನಗರಕ್ಕೆ ಸಮೀಪದಲ್ಲಿರುವ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 21 ಮಂದಿ ಸಜೀವ ದಹನವಾಗಿದ್ದಾರೆ. ಸುಟ್ಟು ಕರಕಲಾಗಿದ್ದ ಎಲ್ಲಾ 21 ಶವಗಳನ್ನ ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ 28 ಜನರಿಗಾಗಿ ಶೋಧ ನಡೆಸಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜನವರಿ 26 ರಂದು ಕೋಲ್ಕತ್ತಾ ನಗರಕ್ಕೆ ಹತ್ತಿರವಿರುವ ದಕ್ಷಿಣ 24 ಪರಗಣ ಜಿಲ್ಲೆಯ ಆನಂದಪುರದಲ್ಲಿ 2 ಗೋದಾಮು ಮತ್ತು ಮೊಮೊ ಕಂಪನಿಯ ಉತ್ಪಾದನಾ ಘಟಕ ಸುಟ್ಟು ಬೂದಿಯಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಟ್ಟಡವಿದ್ದ ರಸ್ತೆ ಮಾರ್ಗದಲ್ಲಿ ಸಂಚಾರ ನಿರ್ಬಂಧ ವಿಧಿಸಿ, ಬಿಎನ್‌ಎಸ್ ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನಂತರ ಸ್ಥಳಕ್ಕೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಮತ್ತು ಇತರ ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಂಕಿಯ ತೀವ್ರತೆ ಮತ್ತು ಹಾನಿಯ ಪ್ರಮಾಣ ಗಮನಿಸಿದ್ರೆ, ಸಾವಿನೋವು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ 2 ದಿನಗಳ ನಂತರ ಎಲ್ಲಾ 21 ಶವಗಳನ್ನ ಹೊರತೆಗೆಯಲಾಗಿದ್ದು, ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ.
