ಉದಯವಾಹಿನಿ, ತುಳುನಾಡಿನ ದೈವಕ್ಕೆ ʻಹೆಣ್ಣು ದೆವ್ವʼ ಅಂತ ಅಪಮಾನ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕ್ಷಮೆ ಕೇಳಿದರೂ ಸಂಕಷ್ಟ ತಪ್ಪದಂತಾಗಿದೆ. ರಣವೀರ್ ಹೇಳಿಕೆ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಕೀಲ ಪ್ರಶಾಂತ್ ಮೆಥಾಲ್ ಪಿಸಿಆರ್ ದಾಖಲಿಸಿ ಮಾಡಿಸಿದ್ದಾರೆ. ಬಿಎನ್‌ಎಸ್ ಸೆಕ್ಷನ್ 196, 299, 302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
2025ರ ನವೆಂಬರ್‌ನಲ್ಲಿ ಗೋವಾದಲ್ಲಿ ಇಂಟರ್ ನ್ಯಾಷನಲ್ ಫಿಲ್ಮ್‌ಫೆಸ್ಟಿವಲ್ ನಡೆದಿತ್ತು. ಈ ವೇಳೆ ರಿಷಬ್ ಶೆಟ್ಟಿ ನಟನೆಯನ್ನ ಹೊಗಳಲು ಮುಂದಾಗಿ ಬಾಲಿವುಡ್ ನಟ ಯಡವಟ್ಟು ಮಾಡಿಕೊಂಡಿದ್ದರು. ಕಾಂತಾರ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.
ರಿಷಬ್ ಅವರ ಕಾಂತಾರ ಸಿನಿಮಾವನ್ನ ಥಿಯೇಟರ್‌ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್ ಸಿಂಗ್ ಅನುಕರಣೆ ಮಾಡಿದ್ದರು. ರಣವೀರ್ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದರು. ಆ ಬಳಿಕ ರಣವೀರ್ ಸಿಂಗ್ ಕ್ಷಮೆ ಕೋರಿದ್ದರು.
