ಉದಯವಾಹಿನಿ, ಟೀಮ್ ಇಂಡಿಯಾ ಲೆಜೆಂಡರಿ ಬ್ಯಾಟರ್ ಯುವರಾಜ್ ಸಿಂಗ್ ಜೂನ್ 10, 2019 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆದರೆ ಧಿಡೀರ್ ನಿರ್ಧಾರವು ಎಲ್ಲರನ್ನು ಅಚ್ಚರಿಗೊಳಿಸಿತ್ತು. ಇದೀಗ ಏಳು ವರ್ಷಗಳ ನಂತರ, ತಮ್ಮ ನಿವೃತ್ತಿಯ ಹಿಂದಿನ ಕಾರಣ ಏನು ಎಂದು ಬಹಿರಂಗ ಪಡಿಸಿದ್ದಾರೆ.
ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ನಿವೃತ್ತಿಯ ಕುರಿತು ಮಾತನಾಡಿರುವ ಯುವಿ ತಮಗೆ ಕೊನೆಯಲ್ಲಿ ಸರಿಯಾದ ಮರ್ಯಾದೆ ಸಿಗಲಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ.
“ನಿವೃತ್ತಿಗೂ ಮೊದಲು ನನಗೆ ನನ್ನ ಆಟವನ್ನು ಆನಂದಿಸಲು ಸಾಧ್ಯವಾಗಲಿಲ್ಲ. ನನಗೆ ಸಿಗಬೇಕಾದ ಬೆಂಬಲ ಮತ್ತು ಗೌರವ ಸಿಗಲಿಲ್ಲ ಎಂದೆನಿಸತೊಡಗಿತು. ಆಗ ನಾನು ಕ್ರಿಕೆಟ್ ಆಡುವುದನ್ನು ಏಕೆ ಮುಂದುವರಿಸಬೇಕು ಎನಿಸತೊಡಗಿತು. ನನಗೆ ಬೇಕಾದದ್ದು ಸಿಗದಿದ್ದಾಗ ತಂಡ ಲ್ಲಿದ್ದು ಏನು ಸಾಬೀತುಪಡಿಸಬೇಕು ಎಂದೆನಿಸಿತು. ಇನ್ಮುಂದೆ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂಬುದು ನನಗೆ ನೋವುಂಟು ಮಾಡುತ್ತಿತ್ತು. ಈ ಆಲೋಚನೆಗಳು ಆರಂಭವಾದ ಬೆನ್ನಲ್ಲೇ ನಾನು ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ನಿರ್ಧಾರ ಮಾಡಿದೆ. ನಾನು ಕ್ರಿಕೆಟ್ ನಿಂದ ದೂರವಾದ ಬೆನ್ನಲ್ಲೇ ಸಹಜ ಸ್ಥಿತಿಗೆ ಮರಳಿದೆ ಎಂದು ಯುವರಾಜ್ ಸಿಂಗ್ ಹೇಳಿದರು.
ಯುವರಾಜ್ ಸಿಂಗ್ ತಮ್ಮ ವೃತ್ತಿಜೀವನದಲ್ಲಿ 40 ಟೆಸ್ಟ್ ಪಂದ್ಯಗಳನ್ನು ಆಡಿದದ್ದಾರೆ. 1,900 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 3 ಶತಕ ಮತ್ತು 11 ಅರ್ಧಶತಕ ಸಿಡಿಸಿದ್ದಾರೆ. 304 ಏಕದಿನ ಪಂದ್ಯಗಳಲ್ಲಿ 8,701 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ 14 ಶತಕಗಳು ಮತ್ತು 52 ಅರ್ಧಶತಕಗಳನ್ನು ಗಳಿಸಿದ್ದಾರೆ. 58 ಟಿ20ಐಗಳಲ್ಲಿ 1,177 ರನ್ ಕಲೆಹಾಕಿದ್ದು ಈ ಸ್ವರೂಪದಲ್ಲಿ 8 ಅರ್ಧಶತಕ ಗಳಿಸಿದ್ದಾರೆ. ಅವರು 132 ಐಪಿಎಲ್ ಪಂದ್ಯಗಳಲ್ಲಿ 2,750 ರನ್ ಗಳಿಸಿದ್ದಾರೆ. ಅವರು 13 ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟಾರೆ ಅಂತರರಾಷ್ಟ್ರೀಯ ಮಟ್ಟದಲ್ಲಿ 11,778 ರನ್ ಗಳಿಸಿದ್ದಾರೆ ಮತ್ತು 148 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. 2007ರಲ್ಲಿ ಸ್ಟುವರ್ಟ್ ಬ್ರಾಡ್ ಅವರು ಎಸೆದ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ವಿಶ್ವದಾಖಲೆ ಬರೆದರು.
