ಉದಯವಾಹಿನಿ , ಅಹಮದಾಬಾದ್ (ಗುಜರಾತ್): ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನವೊಂದು ಗುಜರಾತ್ ಅಹಮದಾಬಾದ್ನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಕುವೈತ್ನಿಂದ ದೆಹಲಿಗೆ ಆಗಮಿಸುತ್ತಿದ್ದ 6ಇ 1232 ವಿಮಾನ ಭದ್ರತಾ ದೃಷ್ಟಿಯಿಂದಾಗಿ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
ಬೆದರಿಕೆ ಕರೆ ಬಂದ ಬೆನ್ನಲ್ಲೇ ತಕ್ಷಣಕ್ಕೆ ಈ ಕುರಿತು ಎಚ್ಚರಿಕೆ ನೀಡಲಾಗಿದ್ದು, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 6.40ಕ್ಕೆ ವಿಮಾನ ಲ್ಯಾಂಡ್ ಆಗಿದೆ. ಈ ವಿಮಾನದಲ್ಲಿ 180 ಜನ ಪ್ರಯಾಣಿಕರಿದ್ದರು. ಈ ವಿಮಾನ ಹಾರಾಟದ ವೇಳೆ ವಿಮಾನ ಯಾನ ಸಂಸ್ಥೆ ಈ ಬೆದರಿಕೆ ಕರೆ ಪಡೆದಿದ್ದು, ಪ್ರಯಾಣಿಕರ ದೃಷ್ಟಿಯಿಂದ ಈ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿಸಲಾಗಿದೆ.
ವಿಮಾನ ಏರ್ಪೋರ್ಸ್ನಲ್ಲಿ ಕೆಳಗೆ ಇಳಿಯುತ್ತಿದ್ದಂತೆ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದು, ಬಳಿಕ ಸಿಐಎಸ್ಎಫ್, ವಿಮಾನ ನಿಲ್ದಾಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಇತರ ಭದ್ರತಾ ಸಂಸ್ಥೆಗಳು ಪರಿಶೀಲನೆ ನಡೆಸಿದವು.
ಈ ಘಟನೆಯ ಮಾಹಿತಿ ನೀಡಿದ ಎಸಿಪಿ ವಿಎನ್ ಯಾದವ್, ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಭದ್ರತಾ ಶಿಷ್ಟಾಚಾರದ ಅನುಸಾರ ಅಹಮದಾಬಾದ್ ನಿಲ್ದಾಣದಲ್ಲಿ ವಿಮಾನ ಇಳಿಯಲು ಅನುಮತಿ ನೀಡಲಾಯಿತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನ ಮತ್ತು ಬ್ಯಾಗೇಜ್ ಅನ್ನು ಸಂಪೂರ್ಣವಾಗಿ ತಪಾಸಣೆ ನಡೆಸಲಾಯಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
