ಉದಯವಾಹಿನಿ , ತಿರುವನಂತಪುರಂ (ಕೇರಳ): ಕಾಂತಾರ ಚಾಪ್ಟರ್-1 ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಖ್ಯಾತ ನಟ ಜಯರಾಮ್ ಅವರನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನ ಕಳವು ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಚೆನ್ನೈನ ನಿವಾಸದಲ್ಲಿ ವಿಶೇಷ ತನಿಖಾ ತಂಡ ಅವರನ್ನು ವಿಚಾರಣೆ ನಡೆಸಿದೆ. ಈ ವೇಳೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉನ್ನಿಕೃಷ್ಣನ್ ಪೊಟ್ಟಿ ಅವರೊಂದಿಗೆ ಎಷ್ಟು ಬಾರಿ ದೇಗುಲದಲ್ಲಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇವರಿಬ್ಬರ ನಡುವೆ ಯಾವುದಾದರೂ ಹಣಕಾಸಿನ ವಹಿವಾಟು ನಡೆದಿದೆಯಾ? ಉನ್ನಿಕೃಷ್ಣನ್ ಅವರ ಜೊತೆ ನಂಟಿರುವ ಕುರಿತಂತೆ ಪ್ರಶ್ನಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಶಬರಿಮಲೆ ಚಿನ್ನ ಕಳವು ಕೇಸ್ ಸಂಬಂಧ ಎರಡು ಪ್ರಕರಣ ದಾಖಲಿಸಿಕೊಂಡು ಎಸ್ಐಟಿ ತನಿಖೆ ನಡೆಸುತ್ತಿದೆ. ಒಂದು ಪ್ರಕರಣ ದ್ವಾರಪಾಲಕ ವಿಗ್ರಹದಲ್ಲಿನ ಚಿನ್ನದ ಕಳ್ಳತನಕ್ಕೆ ಸಂಬಂಧಿಸಿದ್ದರೆ, ಮತ್ತೊಂದು ಶ್ರೀಕೋವಿಲ್ ಬಾಗಿಲು ಚೌಕಟ್ಟುಗಳ (ಗರ್ಭಗುಡಿಯ ಚಿನ್ನ ಕಳವು) ಕುರಿತಾದ ಪ್ರಕರಣವಾಗಿದೆ.
2019ರಲ್ಲಿ ಚೆನ್ನೈನಲ್ಲಿ ಪೊಟ್ಟಿ, ಶಬರಿಮಲೆಯಿಂದ ತಂದ ಚಿನ್ನದ ಲೇಪನಗಳ ತಗಡುಗಳ ಪೂಜೆಯನ್ನು ಆಯೋಜಿಸಿದ್ದರು. ಈ ಪೂಜೆಯಲ್ಲಿ ನಟ ಜಯರಾಮ್ ಉಪಸ್ಥಿತರಿದ್ದು, ಈ ಸಂಬಂಧ ವಿಡಿಯೋಗಳು ಪ್ರಸಾರವಾದ ಹಿನ್ನೆಲೆಯಲ್ಲಿ ಇದೀಗ ಎಸ್ಐಟಿ ಅವರನ್ನು ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣಗಳ ಸಂಬಂಧ ಬಂಧನಕ್ಕೊಳಗಾಗಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಆಡಳಿತ ಅಧಿಕಾರಿಗಳಾದ ಬಿ.ಮುರಾರಿ ಬಾಬು ಮತ್ತು ಎಸ್.ಶ್ರೀಕುಮಾರ್ ಅವರು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಪ್ರಮುಖ ಆರೋಪಿ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿಗೆ ಕೇರಳದ ಕೊಲ್ಲಂನ ವಿಜಿಲೆನ್ಸ್ ನ್ಯಾಯಾಲಯ ಶ್ರೀಕೋವಿಲ್ ಬಾಗಿಲು ಚೌಕಟ್ಟುಗಳ ಪ್ರಕರಣದಲ್ಲಿ (ಗರ್ಭಗುಡಿಯ ಚಿನ್ನ ಕಳವು) ಜಾಮೀನು ಸಿಕ್ಕಿದ್ದರೂ, ದೇಗುಲದ ದ್ವಾರಪಾಲಕ ಮೂರ್ತಿಯ ಚಿನ್ನ ಕಳವು ಪ್ರಕರಣದಲ್ಲಿ ಜೈಲಿನಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿದೆ.

ಉದಯವಾಹಿನಿ , ತಿರುವನಂತಪುರಂ (ಕೇರಳ): ಕಾಂತಾರ ಚಾಪ್ಟರ್-1 ಸೇರಿದಂತೆ ತೆಲುಗು, ತಮಿಳು ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಖ್ಯಾತ ನಟ ಜಯರಾಮ್ ಅವರನ್ನು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನ ಕಳವು ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.