ಉದಯವಾಹಿನಿ, ಶಿವಮೊಗ್ಗ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೂ ಅವಕಾಶ ನೀಡದೇ ಆತುರಾತುರವಾಗಿ ದ್ವೇಷ ಭಾಷಣ ಮಸೂದೆಯನ್ನು ಸರ್ಕಾರ ಮಂಡನೆ ಮಾಡಿಸಿತ್ತು. ಈ ಕಾಯ್ದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.‌ ವಿಜಯೇಂದ್ರ ಆರೋಪಿಸಿದ್ದಾರೆ.ಮಾಧ್ಯಮಗಳ ಜತೆ ಸೋಮವಾರ ಮಾತನಾಡಿದ ವಿಜಯೇಂದ್ರ ಮಾತನಾಡಿದರು. ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಪರಿಣಾಮವಾಗಿ ತರೀಕೆರೆಯಲ್ಲಿ ನಮ್ಮ ಹಿಂದೂ ಕಾರ್ಯಕರ್ತ ವಿಕಾಸ್ ಪುತ್ತೂರು ಭಾಷಣವನ್ನೇ ಆರಂಭಿಸಿರಲಿಲ್ಲ, ಅಲ್ಲಿ ಪೊಲೀಸ್ ಅಧಿಕಾರಿಗಳು ಹೋಗಿ ನೋಟಿಸ್ ಕೊಟ್ಟು, ನೀವೇನಾದರೂ ಮಾತನಾಡಿದರೆ, ಬಂಧಿಸುವುದಾಗಿ ಬೆದರಿಸಿದ್ದಾರೆ ಎಂದು ಟೀಕಿಸಿದರು.
ದಕ್ಷಿಣ ಕನ್ನಡದಲ್ಲಿ ಬಜರಂಗದಳದ ಕಾರ್ಯಕರ್ತ ಶರಣ್ ಪಂಪ್ವೆಲ್, ಗಡಿ ದಾಟದಂತೆ ಕಡಿವಾಣ ಹಾಕಿದ್ದಾರೆ. ಬೆಂಗಳೂರಿನಲ್ಲಿ ಪುನೀತ್ ಕೆರೆಹಳ್ಳಿ ಅವರು ಪ್ರಾಮಾಣಿಕವಾಗಿ ಬಾಂಗ್ಲಾ ದೇಶೀಯರನ್ನು ಪತ್ತೆ ಹಚ್ಚಿ ಪೊಲೀಸರು ಮಾಡುವ ಕೆಲಸ ಮಾಡಿದರೆ, ಅವರನ್ನೂ ಬಂಧಿಸಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರು ಹಿಂದೆ ವೀರಶೈವ ಲಿಂಗಾಯತ ಪ್ರತ್ಯೇಕ ಎಂದು ಒಡೆಯಲು ಮುಂದಾಗಿದ್ದರು. ಈಗ ತಮ್ಮ ಲೋಪ ಮುಚ್ಚಿ ಹಾಕಿಕೊಳ್ಳಲು ರಾಜ್ಯವನ್ನು ಕೇಂದ್ರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ, ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೂ ಅನ್ಯಾಯ ಮಾಡಿದೆ ಎಂದು ತಿಳಿಸಿ ದಕ್ಷಿಣ ಭಾರತದ ನಾಯಕರಾಗಲು ಹೊರಟಿದ್ದಾರೆ ಎಂದು ಟೀಕಿಸಿದರು. ಇಂಥ ವಿಭಜಕ ಮಾನಸಿಕ ಸ್ಥಿತಿ ಸಿದ್ದರಾಮಯ್ಯ ಅವರ ದೃಷ್ಟಿಯಿಂದಲೂ ಒಳ್ಳೆಯದಲ್ಲ. ನಮ್ಮ ರಾಜ್ಯದ ದೃಷ್ಟಿ, ಈ ದೇಶದ ಅಭಿವೃದ್ಧಿ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!