ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಹಗರಣಗಳು ಹೊರ ಬಿದ್ದಿವೆ. ಅಭಿವೃದ್ಧಿ ಶೂನ್ಯವಾಗಿದೆ. ಹೀಗಾಗಿ ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ರಾಜ್ಯಪಾಲರ ಜತೆ ಜಟಾಪಟಿ, ಕೇಂದ್ರದ ವಿರುದ್ಧ ಕ್ಯಾತೆಗಳಂತಹ ಕೀಳೂ ರಾಜಕಾರಣವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಈ ವಾಸ್ತವ ಸಂಗತಿಗಳನ್ನು ಮರೆಮಾಚಿ ರಾಜ್ಯಪಾಲರಿಂದ ಸುಳ್ಳಿನ ಭಾಷಣ ಮಾಡಿಸುವ ಯತ್ನ ಮಾಡಿದೆ. ಹೀಗಾಗಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ರಾಜ್ಯ ಸರ್ಕಾರದ ಪ್ರಸ್ತಾವವನ್ನು ನಾನು ವಿರೋಧಿಸುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ವಿಧಾನಸಭೆಯಲ್ಲಿ ಭಾಷಣ ಮಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಇದುವರೆಗೆ ಕೇಂದ್ರ ಸರ್ಕಾರದ ವಿರುದ್ಧ 18 ನಿರ್ಣಯ ಕೈಗೊಂಡಿದೆ. ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಕಾಲು ಕೆರೆದು ಜಗಳ ಮಾಡುವ ಪರಿಣಾಮ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಗಾಂಧೀಜಿಯ ಹೆಸರನ್ನು ಹೇಳುವ ಕಾಂಗ್ರೆಸ್ ತನ್ನ ಅವಧಿಯ ಯೋಜನೆಗಳಿಗೆ ಗಾಂಧಿ ಅವರ ಹೆಸರಿಗಿಂತ ಹೆಚ್ಚಾಗಿ ನೆಹರೂ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಹೆಸರಿಟ್ಟಿತ್ತು. ಈಗ ಮಹಾತ್ಮ ಗಾಂಧಿ ಅವರ ಹೆಸರನ್ನು ಬಳಸಿಕೊಂಡು ಅಧಿಕಾರ ಹಿಡಿಯಲು ಹವಣಿಸುತ್ತಿದೆ ಎಂದು ಟೀಕಿಸಿದರು.
ಸನ್ಮಾನ್ಯ ಸಭಾಧ್ಯಕ್ಷರೆ, ʼರಾಮʼನ ಹೆಸರಿನ ಬಗ್ಗೆ, ಕಾಂಗ್ರೆಸ್ ಸರ್ಕಾರಕ್ಕೆ ಬಹು ದೊಡ್ಡ ಅಲರ್ಜಿ ಇದೆ. ಆದರೆ ಭಾರತೀಯರಿಗೆ “ರಾಮ ಎಂಬುದು ಒಂದು ಹೆಸರಲ್ಲ. ಅದು ಒಂದು ಆದರ್ಶ”. ಇಂತಹ ರಾಮನ ಬಗ್ಗೆ ಕಾಂಗ್ರೆಸ್ಸಿಗರಿಗೆ ಇರುವ ತಾತ್ಸಾರ ಭಾವನೆ ಎಂತಹದ್ದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಇದೇ ಸಿದ್ದರಾಮಯ್ಯ ಸರ್ಕಾರ ರಾಮನಗರ ಜಿಲ್ಲೆ ಎಂದಿದ್ದ ಹೆಸರಿನಲ್ಲಿ “ರಾಮ”ನನ್ನು ತೆಗೆದುಹಾಕಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕಾರಣ ಮಾಡಿದರು.
