ಉದಯವಾಹಿನಿ, ನವದೆಹಲಿ: 2024ರಲ್ಲಿ ಪುಣೆ ಪೋರ್ಷೆ ಅಪಘಾತದಲ್ಲಿ ಟೆಕ್ಕಿಗಳಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿಯ ರಕ್ತದ ಮಾದರಿಗಳನ್ನು ಬದಲಿಸಿದ್ದ ಮೂವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಆರೋಪಿಗಳಾದ ಆದಿತ್ಯ ಅವಿನಾಶ್ ಸೂದ್, ಆಶಿಶ್ ಸತೀಶ್ ಮಿತ್ತಲ್ ಮತ್ತು ಅಮರ್ ಸಂತೋಷ್ ಗಾಯಕ್ವಾಡ್‌ಗೆ ಜಾಮಿನು ದೊರೆತಿದೆ. ಈ ಮೂವರನ್ನು ಕಾರು ಚಲಾಯಿಸುತ್ತಿದ್ದ ಅಪ್ರಾಪ್ತನ ರಕ್ತದ ಮಾದರಿ ಬದಲಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಜಾಮೀನು ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಅರ್ಜಿದಾರರು ಮೂರು ವರ್ಷಗಳ ಕಾಲ ಬಂಧನದಲ್ಲಿದ್ದಾರೆ. ಪ್ರಕರಣದಲ್ಲಿ ಸಾಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ. ಈ ವಿಷಯದಲ್ಲಿ ಇನ್ನೂ 159 ಸಾಕ್ಷಿಗಳನ್ನು ವಿಚಾರಣೆ ನಡೆಸಬೇಕಾಗಿದೆ.
ಅಪಘಾತಕ್ಕೆ ಕಾರಣನಾದ ಅಪ್ರಾಪ್ತನ ವಿರುದ್ಧ ವಿಚಾರಣೆ ನಡೆಸಲಾಗುತ್ತಿದೆ. ಹೀಗಾಗಿ, ವಿಚಾರಣೆಯಲ್ಲಿ ಯಾವುದೇ ಪ್ರಗತಿಯಿಲ್ಲದಿದ್ದರೂ ಮತ್ತು ನೂರಕ್ಕೂ ಹೆಚ್ಚು ಪ್ರಾಸಿಕ್ಯೂಷನ್ ಸಾಕ್ಷಿಗಳ ಕಾರಣದಿಂದಾಗಿ ಪ್ರಕರಣ ಬಗೆಹರಿಯುವುದು ವಿಳಂಬವಾಗುವ ಸಾಧ್ಯತೆಯಿದೆ. ಆದ್ದರಿಂದ ಮೇಲ್ಮನವಿದಾರರನ್ನು ನಿರಂತರವಾಗಿ ಜೈಲಿನಲ್ಲಿಡುವುದು ಸರಿಯಲ್ಲ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.
