ಉದಯವಾಹಿನಿ , ನವದೆಹಲಿ: ಲೋಕಸಭೆಯಲ್ಲಿ ಸ್ಪೀಕರ್ ಪೀಠದ ಮೇಲೆ ಕಾಗದ ಹರಿದು ಎಸೆದ 8 ಮಂದಿ ಸಂಸದರನ್ನ ಇಡೀ ಬಜೆಟ್ ಅಧಿವೇಶನದಿಂದಲೇ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡ ಸಂಸದರಲ್ಲಿ ಮಾಣಿಕ್ಕಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕಿರಣ್ ಕುಮಾರ್ ರೆಡ್ಡಿ, ಎಸ್ ವೆಂಕಟೇಶನ್, ಹಿಬಿ ಈಡನ್, ಡೀನ್ ಕುರಿಯಾಕೋಸ್ ಮತ್ತು ಪ್ರಶಾಂತ್ ಪಡೋಲೆ ಸೇರಿದ್ದಾರೆ. ಈ ಪೈಕಿ 7 ಮಂದಿ ಕಾಂಗ್ರೆಸ್‌ನವರಾಗಿದ್ದು, ವೆಂಕಟೇಸನ್ ಸಿಪಿಎಂ ನವರಾಗಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ಕಲಾಪ ಪುನಾರಂಭವಾದಾಗ ಸಭಾಪತಿಗಳು ಸ್ಪೀಕರ್ ಪೀಠದ ಮೇಲೆ ಕಾಗದ ಎಸೆದ ಸಂಸದರ ಹೆಸರುಗಳನ್ನ ಪ್ರಸ್ತಾಪಿಸಿದ್ರು. ನಂತರ ಅಧಿವೇಶನದ ಉಳಿದ ಅವಧಿಗೆ ಕಾಗದ ಎಸೆದ ಸಂಸದರನ್ನ ಅಮಾನತುಗೊಳಿಸುವ ಪ್ರಸ್ತಾವನೆಯನ್ನ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡಿಸಿದರು. ಇದನ್ನ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಪ್ರಸ್ತಾವನೆ ಅಂಗೀಕಾರವಾದ ನಂತರವೂ ವಿಪಕ್ಷ ಸದಸ್ಯರು ಸಭಾಪತಿಯ ಮೇಲೆ ಕಾಗದಗಳನ್ನ ಎಸೆಯುತ್ತಲೇ ಇದ್ದರು.
