ಉದಯವಾಹಿನಿ , ಹೈದರಾಬಾದ್​: ಮಹಾರಾಷ್ಟ್ರ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತಿಲ್ಲ ಎಂಬ ನಿಯಮವಿದೆ. ತನಗಿದ್ದ ಮೂವರು ಮಕ್ಕಳಿಂದಾಗಿ, ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದ ಕಾರಣ ಓರ್ವ ಮಗಳನ್ನು ತಂದೆಯೇ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಮಹಾರಾಷ್ಟ್ರದ ನಾಂದೇಡ್‌ನ ಕೆರೂರ್ ಗ್ರಾಮದ ಪಾಂಡುರಂಗ ಕೊಂಡಮಂಗಲೆ ಕೊಲೆ ಆರೋಪಿ. ಕ್ಷೌರಿಕನ ಅಂಗಡಿ ನಡೆಸುತ್ತಿದ್ದ ಈತನಿಗೆ ಅವಳಿ ಹೆಣ್ಣುಮಕ್ಕಳು ಸೇರಿ ಮೂವರು ಮಕ್ಕಳಿದ್ದಾರೆ. ಇದರಲ್ಲಿ ಹಿರಿಯ ಅವಳಿ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಎಡಪಲ್ಲಿ ಮಂಡಲದ ಹೊರವಲಯದಲ್ಲಿರುವ ಎಆರ್​ಪಿ ಕ್ಯಾಂಪ್ ಬಳಿಯ ಡಿ46 ಕಾಲುವೆಗೆ ಜನವರಿ 29 ರಂದು ಎಸೆದು ಕೊಂದಿದ್ದಾನೆ. ಸದ್ಯ ಆತನನ್ನು ಬಂಧಿಸಲಾಗಿದೆ.

ಪ್ರಕರಣದ ವಿವರ: ಪ್ರಕರಣದ ತನಿಖೆ ನಡೆಸುತ್ತಿರುವ ತೆಲಂಗಾಣ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ಪಾಂಡುರಂಗ ಕೊಂಡಮಂಗಲೆ ಅವರು ಮೂರು ವರ್ಷದ ಗಂಡು ಮಗು ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ. ಗ್ರಾಮ ಪಂಚಾಯತ್​ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿದ್ದ. ಆದರೆ, ಮಹಾರಾಷ್ಟ್ರ ಚುನಾವಣಾ ನಿಯಮಗಳ ಪ್ರಕಾರ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ.

ಈ ಕಾರಣಕ್ಕಾಗಿ ತನ್ನ ಮೂವರು ಮಕ್ಕಳಲ್ಲಿ ಒಬ್ಬರನ್ನು ತನಗೆ ನೀಡುವಂತೆ ಗ್ರಾಮದ ಸರಪಂಚ್​ ಶಿಂಧೆ ಗಣೇಶ್ ಸಲಹೆ ನೀಡಿದ್ದಾನೆ. ಅದರಂತೆ, ತನ್ನ ಮಗನ ಜನನ ಪ್ರಮಾಣಪತ್ರದಲ್ಲಿ ಮಗುವಿನ ತಂದೆ ಶಿಂಧೆ ಗಣೇಶ್​ ಎಂದು ಬದಲಿಸಲು ಪ್ರಯತ್ನಿಸಿದ್ದಾರೆ. ಆದರೆ, ದಾಖಲೆಗಳನ್ನು ತಿರುಚುವಲ್ಲಿ ವಿಫಲರಾಗಿದ್ದಾರೆ.

ಬೈಕ್​​ನಲ್ಲಿ ಕರೆದೊಯ್ದು ಕಾಲುವೆಗೆ ಎಸೆದ: ಇದರಿಂದ, ಹತಾಶನಾದ ಆರೋಪಿ ಪಾಂಡುರಂಗ ತನ್ನ ಮಗಳನ್ನು ಹತ್ಯೆ ಮಾಡಲು ಸ್ಕೆಚ್​ ಹಾಕಿದ್ದ. ಅದರಂತೆ, ಹಿರಿಯ ಮಗಳನ್ನು ಬೈಕ್​​ನಲ್ಲಿ ಕೂರಿಸಿಕೊಂಡು, ಸುಮಾರು 60 ಕಿಲೋಮೀಟರ್ ದೂರ ಕ್ರಮಿಸಿ ತೆಲಂಗಾಣ ವ್ಯಾಪ್ತಿಗೆ ಬರುವ ನಿಜಾಮಾಬಾದ್​ ಜಿಲ್ಲೆಯ ಡಿ46 ಕಾಲುವೆಗೆ ಮಗಳ ಕೂಗು ಮತ್ತು ರೋಧನೆಯನ್ನು ಲೆಕ್ಕಿಸದೇ ಬಿಸಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ, ಬಾಲಕಿಯ ಶವ ಕಾಲುವೆಯಲ್ಲಿ ತೇಲಿಬಂದಿತು. ಈ ಕುರಿತು ಪೊಲೀಸರು ಮಾಹಿತಿ ಪಡೆದ ನಂತರ, ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆಕೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಯಿತು. ಕೆರೂರ್ ಗ್ರಾಮದ ಪೊಲೀಸ್ ಕಾನ್‌ಸ್ಟೇಬಲ್​ವೊಬ್ಬರು ಈ ಬಾಲಕಿ ಆರೋಪಿ ಪಾಂಡುರಂಗನ ಮಗಳು ಎಂಬುದನ್ನು ಗುರುತಿಸಿದ್ದಾರೆ.

ಈ ಕುರಿತು ವಿಚಾರಣೆ ನಡೆಸಿದಾಗ, ಚುನಾವಣೆಗೆ ನಿಲ್ಲಲು ತಾನೇ ಮಗುವನ್ನು ಕಾಲುವೆಗೆ ಎಸೆದು ಹತ್ಯೆ ಮಾಡಿದೆ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ. ಪಾಂಡುರಂಗನ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಪಿತೂರಿಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಜೊತೆಗೆ, ಸರಪಂಚ್​ ಗಣೇಶ್ ಶಿಂಧೆ ವಿರುದ್ಧವೂ ಪಿತೂರಿ ಕೇಸ್​ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!