ಉದಯವಾಹಿನಿ , ಮಾಸ್ಕೋ: ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಈ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ʼʼಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿಕೊಂಡಿದೆʼʼ ಎಂದು ಟ್ರಂಪ್ ಹೇಳಿದ್ದಾರೆ. ಇದೀಗ ರಷ್ಯಾ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ತೈಲ ಖರೀದಿ ನಿಲ್ಲಿಸುವ ಬಗ್ಗೆ ದೆಹಲಿಯಿಂದ ಇದುವರೆಗೆ ಯಾವುದೇ ಸಂದೇಶ ಬಂದಿಲ್ಲ ಎಂದು ತಿಳಿಸಿದೆ.
ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ಅಮೆರಿಕದಿಂದ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸಲು ಮೋದಿ ಬದ್ಧರಾಗಿದ್ದಾರೆ ಎಂಬ ಟ್ರಂಪ್ ಘೋಷಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಅದಾಗ್ಯೂ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಬಗ್ಗೆ ಭಾರತ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತ ತೈಲ ಖರೀದಿಯನ್ನು ನಿಲ್ಲಿಸಲಿದೆ ಎನ್ನುವ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಷ್ಯಾ ಈ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದಿದೆ. “ಇಲ್ಲಿಯವರೆಗೆ, ಈ ವಿಷಯದ ಬಗ್ಗೆ ದೆಹಲಿಯಿಂದ ಯಾವುದೇ ಹೇಳಿಕೆ ಬಂದಿಲ್ಲ” ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ವರದಿಗಾರರಿಗೆ ತಿಳಿಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.
ರಷ್ಯಾ ಭಾರತದೊಂದಿಗಿನ ಸಂಬಂಧವನ್ನು ಗೌರವಿಸುತ್ತದೆ ಮತ್ತು ಅದರ ಕಾರ್ಯತಂತ್ರದ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತದೆ ಎಂದು ಪೆಸ್ಕೋವ್ ಹೇಳಿದ್ದಾರೆ. “ನಾವು ದ್ವಿಪಕ್ಷೀಯ ಅಮೆರಿಕ-ಭಾರತೀಯ ಸಂಬಂಧಗಳನ್ನು ಗೌರವಿಸುತ್ತೇವೆ. ಜತೆಗೆ ರಷ್ಯಾ ಮತ್ತು ಭಾರತದ ನಡುವಿನ ಮುಂದುವರಿದ ಕಾರ್ಯತಂತ್ರದ ಪಾಲುದಾರಿಕೆಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುತ್ತೇವೆ. ಇದು ನಮಗೆ ಅತ್ಯಂತ ಮುಖ್ಯವಾದ ಒಪ್ಪಂದ ಮತ್ತು ದೆಹಲಿಯೊಂದಿಗೆ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾವು ಮುಂದಾಗಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
