ಉದಯವಾಹಿನಿ , ಜುಂಝುನು(ರಾಜಸ್ಥಾನ): ಇಲ್ಲಿನ ನವಲ್‌ಗಢ ಪಟ್ಟಣದ ನಾನ್ಸಾ ಗೇಟ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನ ಶಾಖೆಯಲ್ಲಿ ಬಹುದೊಡ್ಡ ಹಗರಣ ಬೆಳಕಿಗೆ ಬಂದಿದೆ.ಬ್ಯಾಂಕ್ ಮ್ಯಾನೇಜರ್ ಮತ್ತಿತರರು ಸೇರಿಕೊಂಡು ಬ್ಯಾಂಕಿನಲ್ಲಿ ಗ್ರಾಹಕರಿಟ್ಟ ಅಸಲಿ ಚಿನ್ನಾಭರಣಗಳನ್ನು ನಕಲಿ ಆಭರಣಗಳಿಂದ ಬದಲಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮೂಲಕ ನಾಲ್ಕು ಕೆ.ಜಿಗೂ ಹೆಚ್ಚು ಚಿನ್ನ ನಾಪತ್ತೆಯಾಗಿದೆ. ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಳುವಾದ ಚಿನ್ನದ ಬೆಲೆ ಆರೂವರೆ ಕೋಟಿ ರೂಪಾಯಿಗೂ ಹೆಚ್ಚು ಎಂಬುದು ಅಂದಾಜು.
ಐವರು ಉದ್ಯೋಗಿಗಳು ಸಸ್ಪೆಂಡ್: ಹಗರಣ ಬೆಳಕಿಗೆ ಬಂದ ನಂತರ ಬ್ಯಾಂಕಿನ ಆಡಳಿತ ಮಂಡಳಿ ಮ್ಯಾನೇಜರ್ ಸೇರಿದಂತೆ ಐವರು ಉದ್ಯೋಗಿಗಳನ್ನು ಕೆಲಸದಿಂದ ಸಸ್ಪೆಂಡ್ ಮಾಡಿದೆ.ಬ್ಯಾಂಕ್ ಅಧಿಕಾರಿ ಮುಖೇಶ್ ಕುಮಾರ್ ಸಿಹಾಗ್ ಅವರು, ಈ ಹಿಂದಿನ ಬ್ಯಾಂಕ್ ಮ್ಯಾನೇಜರ್ ಅಮಿತ್ ಜಂಗಿಡ್, ಉಪ ವ್ಯವಸ್ಥಾಪಕ ಅನಂತ್ ಪ್ರಕಾಶ್ ಚೌಧರಿ ಮತ್ತು ನಿರ್ದೇಶಕ ಸಂತೋಷ್ ಕುಮಾರ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಎಎಸ್ಪಿ ದೇವೇಂದ್ರ ರಾಜವತ್ ಹೇಳಿದ್ದಾರೆ.
ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದ್ದ ಚಿನ್ನಾಭರಣಗಳ ಪ್ಯಾಕೆಟ್‌ಗಳನ್ನು ತಿರುಚಲಾಗಿದೆ. ಈ ಪ್ಯಾಕೆಟ್‌ಗಳಲ್ಲಿ ಅಸಲಿ ಚಿನ್ನಾಭರಣಗಳ ಬದಲ ನಕಲಿ ಆಭರಣಗಳನ್ನು ಇಟ್ಟಿದ್ದಾರೆ. ಇದರಂತೆ 73 ಪ್ಯಾಕೆಟ್‌ಗಳಲ್ಲಿ ನಕಲಿ ಚಿನ್ನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
73 ಪ್ಯಾಕೆಟ್‌ಗಳಲ್ಲಿ 4 ಕೆ.ಜಿ 198 ಗ್ರಾಂ ನಕಲಿ ಚಿನ್ನದ ಆಭರಣಗಳು ದೊರೆತಿವೆ. ಮೂರು ಪ್ಯಾಕೆಟ್‌ಗಳಲ್ಲಿ ತೂಕವನ್ನೂ ಕಡಿಮೆ ಮಾಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬ್ಯಾಂಕಿನಿಂದ ಸಾಲ ಪಡೆದವರ ಆಭರಣಗಳಿದ್ದ ಸುಮಾರು 450 ಪ್ಯಾಕೆಟ್‌ಗಳನ್ನು ಸ್ಟ್ರಾಂಗ್ ರೂಮಿನ ಚಿನ್ನದ ಸೇಫ್‌ನಲ್ಲಿ ಸಂಗ್ರಹಿಸಲಾಗಿತ್ತು. ಇವುಗಳಲ್ಲಿ ಸುಮಾರು 250ರಲ್ಲಿ ನಕಲಿ ಚಿನ್ನ ಇಡಲಾಗಿದೆ ಎಂದು ತಿಳಿದು ಬಂದಿದೆ.
ಓರ್ವ ಗ್ರಾಹಕ ತನ್ನ 152.19 ಗ್ರಾಂ ಚಿನ್ನವನ್ನು ಗಿರವಿ ಇಟ್ಟಿರುವುದಾಗಿ ತಿಳಿಸಿದ್ದಾರೆ. ಇವರ ಪ್ಯಾಕೆಟ್‌ನಲ್ಲಿ ಕೇವಲ 30 ಗ್ರಾಂ ಚಿನ್ನ ಮಾತ್ರ ಕಂಡುಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹಿಂದಿನ ಶಾಖಾ ವ್ಯವಸ್ಥಾಪಕ ಅಮಿತ್ ಕುಮಾರ್ ಜಂಗಿಡ್ ಮತ್ತು ಬ್ಯಾಂಕಿಂಗ್ ವರದಿಗಾರ ಸಂತೋಷ್ ಕುಮಾರ್ ಸೈನಿ ಅವರು ಜನವರಿ 21ರಂದು ಸಂಜೆ 6:50ರ ಸುಮಾರಿಗೆ ಒಂದು ಪೆಟ್ಟಿಗೆಯಲ್ಲಿ ಚಿನ್ನಾಭರಣಗಳೊಂದಿಗೆ ಬ್ಯಾಂಕ್ ಶಾಖೆಯಿಂದ ಹೊರಹೋಗುತ್ತಿರುವುದು ಕಂಡುಬಂದಿದೆ.
ಇದರ ನಂತರ ಜನವರಿ 22ರಂದು ಸಂಜೆ 6:30ಕ್ಕೆ ಸ್ಟ್ರಾಂಗ್ ರೂಮಿನಲ್ಲಿರುವ ಚಿನ್ನದ ಸೇಫ್‌ನಲ್ಲಿ ಇಡಲಾಗಿದ್ದ ಚಿನ್ನದ ಪ್ಯಾಕೆಟ್‌ಗಳನ್ನು ಇಬ್ಬರೂ ತಿರುಚುತ್ತಿರುವುದೂ ಸೆರೆಯಾಗಿದೆ. ಈ ಎರಡೂ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು 11 ಸಾವಿರ ರೂಪಾಯಿ ಹೆಚ್ಚಳವಾಗಿತ್ತು ಎಂಬುದನ್ನು ಗಮನಿಸಬೇಕು.
