ಉದಯವಾಹಿನಿ , ಬಾರಾಮತಿ(ಮಹಾರಾಷ್ಟ್ರ): ಜನವರಿ 29ರಂದು ಪುಣೆಯ ಬಾರಾಮತಿಯಲ್ಲಿ ಮಹಾರಾಷ್ಟ್ರ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ 20.50 ಲಕ್ಷ ರೂಪಾಯಿಯ ಚಿನ್ನಾಭರಣ ಮತ್ತು ನಗದು ಕದ್ದು ಕಾಲ್ಕಿತ್ತ ಏಳು ಆರೋಪಿಗಳನ್ನು ಬಾರಾಮತಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳನ್ನು ರಾಜ್‌ಕುಮಾರ್ ಬಾಬುರಾವ್ ಅಠಾವಲೆ, ಮೊಹಮ್ಮದ್ ಅನೀಸ್, ಎಜಾಜ್ ಭಾಗು ಮಿರಾವಾಲೆ, ಮೊಹಮ್ಮದ್ ಸಾದಿಕ್, ಬಾಲು ಅಲಿಯಾಸ್ ದತ್ತಾತ್ರಯ ಬಬನ್ ಧೋತ್ರೆ, ತುಷಾರ್ ಕೈಲಾಸ್ ಮಸಾಲ್ ಮತ್ತು ನಿತಿನ್ ಅಂಕುಶ್ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಬಾರಾಮತಿ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಂಜಿತ್ ಬಾಳಾಸಾಹೇಬ್ ಜಾಧವ್, ವಿಶ್ವಜಿತ್ ಅನಿಲ್ ತುಪೆ, ಅಂಕುಶ್ ಶಾಂತಾರಾಮ್ ದಿಘೆ, ಪ್ರಶಾಂತ್ ಲಕ್ಷ್ಮಣ್ ಸಪ್ಕಲ್, ವಿಕಾಸ್ ಕೈಲಾಸ್ ಭಾಗವತ್, ರಂಜಿತ್ ಮಧುಕರ್ ಭೋಂಗಲೆ ಮತ್ತು ಇತರರಿಗೆ ಸೇರಿದ ಚಿನ್ನದ ಸರಗಳು ಮತ್ತು ನಗದು ಕಳವಾಗಿದ್ದರ ಬಗ್ಗೆ ದೂರು ದಾಖಲಾಗಿತ್ತು. ಕದ್ದ ವಸ್ತುಗಳ ಮೌಲ್ಯ ಸುಮಾರು 20 ಲಕ್ಷ ರೂ.ಗಳಿಗೂ ಹೆಚ್ಚು. ಆರೋಪಿಗಳು ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲು ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ.28ರಂದು ಬೆಳಗ್ಗೆ ವಿಮಾನ ಅಪಘಾತ ಸಂಭವಿಸಿತ್ತು. ಫೆ.5ರಂದು ರಾಜ್ಯದಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ್ ಚುನಾವಣೆ ಪ್ರಚಾರದ ಭಾಗವಾಗಿ ಬಾರಾಮತಿ ಜಿಲ್ಲೆಯಲ್ಲಿ ನಡೆಯಲಿದ್ದ ಹಲವು ಸಾರ್ವಜನಿಕ ರ‍್ಯಾಲಿಗಳಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಅಷ್ಟರಲ್ಲಿ ಭೀಕರ ಅವಘಡ ಸಂಭವಿಸಿತ್ತು.
ವಿಎಸ್ಆರ್ ಏವಿಯೇಷನ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ಲಿಯರ್‌ಜೆಟ್ – 45 ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಐವರಿದ್ದರು. ಲಿಯರ್‌ಜೆಟ್ 45 ಬೊಂಬಾರ್ಡಿಯರ್ ಏರೋಸ್ಪೇಸ್‌ನ ಲಿಯರ್‌ಜೆಟ್ ವಿಭಾಗದಿಂದ ತಯಾರಿಸಲ್ಪಟ್ಟ ಮಧ್ಯಮ ಗಾತ್ರದ ವಾಣಿಜ್ಯ ಜೆಟ್ ವಿಮಾನ ಇದಾಗಿದೆ.
