ಉದಯವಾಹಿನಿ , ಡೆಹ್ರಾಡೂನ್: 2022ರಲ್ಲಿ ನಡೆದ 19 ವರ್ಷದ ರೆಸಾರ್ಟ್ ಸ್ವಾಗತಗಾರ್ತಿ ಅಂಕಿತಾ ಭಂಡಾರಿ ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ತಂಡ (ಸಿಬಿಐ) ವಹಿಸಿಕೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಉತ್ತರಾಖಂಡ ಪೊಲೀಸರಿಂದ ಕೇಸ್​ ತನ್ನ ತೆಕ್ಕೆಗೆ ತೆಗೆದುಕೊಂಡು ಅಪರಿಚಿತ ವಿಐಪಿ ವಿರುದ್ಧ ಪ್ರಕರಣ ದಾಖಲಿಸಿದೆ.
ಸಿಬಿಐ ಅಧಿಕಾರಿಗಳ ತಂಡವು ಡೆಹ್ರಾಡೂನ್ ಮತ್ತು ಋಷಿಕೇಶಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹ ಮತ್ತು ವಿವರಗಳನ್ನು ಕಲೆಹಾಕಿತು. ಈಗಾಗಲೇ ಪ್ರಕರಣದಲ್ಲಿ ಆರೋಪಿಗಳಾದ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್​ ಸೌರಭ್ ಭಾಸ್ಕರ್ ಮತ್ತು ಉದ್ಯೋಗಿ ಅಂಕಿತ್ ಗುಪ್ತಾ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಮೃತ ಯುವತಿಯ ಪೋಷಕರ ಬೇಡಿಕೆಯ ಮೇರೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಅದರಂತೆ ಸಿಬಿಐ ಉತ್ತರಾಖಂಡ ಪೊಲೀಸರಿಂದ ಮಾಹಿತಿ ಸಂಗ್ರಹಿಸಿತು. ಅದರ ಆಧಾರದ ಮೇಲೆ ತನ್ನದೇ ಆದ ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಐಪಿಯೊಬ್ಬರಿಂದಾಗಿ ನನ್ನ ಮಗಳು ಕೊಲೆಗೀಡಾಗಿದ್ದಾಳೆ. ಆಕೆಗೆ ನ್ಯಾಯ ಸಿಗಬೇಕಾದರೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಮೃತ ಯುವತಿಯ ಪೋಷಕರು ಒತ್ತಾಯಿಸಿ ಸಿಎಂಗೆ ಪತ್ರ ಬರೆದಿದ್ದರು.
ಪ್ರಕರಣದ ಹಿನ್ನೆಲೆ: ಉತ್ತರಾಖಂಡದ ಪೌರಿಯ ವನಂತ್ರ ರೆಸಾರ್ಟ್‌ನಲ್ಲಿ ಸ್ವಾಗತಗಾರ್ತಿಯಾಗಿದ್ದ ಅಂಕಿತಾ ಭಂಡಾರಿ ಅವರು 2022 ರಲ್ಲಿ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಅವರ ಇಬ್ಬರು ಉದ್ಯೋಗಿಗಳಿಂದ ಕೊಲೆಯಾಗಿದ್ದಳು. ಆದರೆ, ಇದರ ಹಿಂದೆ ವಿಐಪಿಯೊಬ್ಬರ ಕೈವಾಡವಿದೆ. ಅವರು ಪತ್ತೆಯಾಗಲು ಸಿಬಿಐ ತನಿಖೆಯಾಗಬೇಕು ಎಂದು ವಿಪಕ್ಷಗಳು ಸೇರಿದಂತೆ ಸಂಘ ಸಂಸ್ಥೆಗಳು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ಸ್ಥಳೀಯ ಕೋರ್ಟ್​​ ಜೀವಾವಧಿ ಶಿಕ್ಷೆ ವಿಧಿಸಿದೆ.

 

Leave a Reply

Your email address will not be published. Required fields are marked *

error: Content is protected !!