
ಉದಯವಾಹಿನಿ , ಶಿರಡಿ: ನೇತ್ರದಾನ ಮಹಾದಾನ, ಅಂಧರ ಬಾಳಿಗೆ ಬೆಳಕ ಕಿರಣ ಎಂಬ ಮಾತಿದೆ. ವ್ಯಕ್ತಿ ತಾನು ಮರಣಿಸಿದ ನಂತರವೂ ಬದುಕುವ ಪವಿತ್ರ ಕೆಲಸವಿದು. ದೃಷ್ಟಿ ಇಲ್ಲದವರಿಗೆ ದೃಷ್ಟಿ ದಾನ ಮಾಡುವುದು ಪುಣ್ಯದ ಕೆಲಸ ಎಂದೇ ಹೇಳಲಾಗುತ್ತದೆ. ಈ ಮಾತನ್ನು ಸಾಕಾರಗೊಳಿಸುವ ಕೆಲಸ ಮಹಾರಾಷ್ಟ್ರದ ಶಿರಡಿಯ ಸಾಯಿಬಾಬಾ ಟ್ರಸ್ಟ್‌ನ ಶ್ರೀ ಸಾಯಿನಾಥ್ ಆಸ್ಪತ್ರೆಯ ವತಿಯಿಂದ ಆಗುತ್ತಿದೆ. ಇಲ್ಲಿ 2025ರ ಮಾರ್ಚ್ ಮತ್ತು 2026ರ ಜನವರಿಯ ನಡುವೆ 28 ದಾನಿಗಳು ರಾಜ್ಯಾದ್ಯಂತ 32 ನಿರ್ಗತಿಕ ರೋಗಿಗಳಿಗೆ ದೃಷ್ಟಿ ದಾನ ಮಾಡಿದ್ದಾರೆ.
ಸಾಯಿಬಾಬಾ ಟ್ರಸ್ಟ್ ಶಿರಡಿಯಲ್ಲಿ ಶ್ರೀ ಸಾಯಿನಾಥ್ ಆಸ್ಪತ್ರೆ ಮತ್ತು ಶ್ರೀ ಸಾಯಿಬಾಬಾ ಆಸ್ಪತ್ರೆ ಎಂಬ ಎರಡು ಆಸ್ಪತ್ರೆಗಳನ್ನು ನಡೆಸುತ್ತಿದೆ. ಶ್ರೀ ಸಾಯಿನಾಥ್ ಆಸ್ಪತ್ರೆ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದರೆ, ಶ್ರೀ ಸಾಯಿಬಾಬಾ ಆಸ್ಪತ್ರೆ ರಿಯಾಯಿತಿ ದರದಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಒದಗಿಸುತ್ತಿದೆ. ಉಚಿತ ಚಿಕಿತ್ಸೆ, ಆಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಸಾಯಿಬಾಬಾರ ಮೇಲಿನ ಅಪಾರ ಭಕ್ತಿಯಿಂದಾಗಿಯೂ ದೇಶದ ವಿವಿಧ ಭಾಗಗಳಿಂದ ನೂರಾರು ರೋಗಿಗಳು ಪ್ರತಿದಿನ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ.
ಇತ್ತೀಚೆಗೆ, ಸಾಯಿನಾಥ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಇಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅನೇಕ ರೋಗಿಗಳು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ ಅನೇಕ ರೋಗಿಗಳಿಗೆ ಆಶಾ ಕೇಂದ್ರವೇ ಆಗಿದೆ. ಸಾಯಿ ಟ್ರಸ್ಟ್‌ನ ಸಾಮಾಜಿಕ ಮನವಿಗೆ ಸ್ಪಂದಿಸಿ, ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರ ನಿಧನಾ ನಂತರ ಅವರ ಕಣ್ಣುಗಳನ್ನು ದಾನ ಮಾಡಲು ಮುಂದೆ ಬಂದಿವೆ. ದುಃಖದ ಕ್ಷಣಗಳಲ್ಲೂ ಅವರು ತೆಗೆದುಕೊಂಡ ಮಾನವೀಯ ನಿರ್ಧಾರಗಳು ಅನೇಕರ ಬದುಕು ಬೆಳಗಿಸಿವೆ. ಸಮಾಜಕ್ಕೆ ಸ್ಫೂರ್ತಿಯಾಗಿದೆ.ಸಂಸ್ಥಾನದ ಶ್ರೀ ಸಾಯಿನಾಥ್ ಆಸ್ಪತ್ರೆ ಈ ಹಿಂದೆ ಅನೇಕ ಯಶಸ್ವಿ ಕಾರ್ನಿಯಲ್ ಕಸಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ. ಆಧುನಿಕ ಕಣ್ಣಿನ ಬ್ಯಾಂಕ್ ಮತ್ತು ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಬಳಸಿ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಇಡೀ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ನಡೆಸಲಾಗುತ್ತದೆ. ಇದರ ಪರಿಣಾಮವಾಗಿ, ಸಾಯಿನಾಥ್ ಆಸ್ಪತ್ರೆ ಕಾರ್ನಿಯಲ್ ಕಸಿ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆಯಿಂದ ಖ್ಯಾತಿ ಗಳಿಸಿದೆ.
