ಉದಯವಾಹಿನಿ , ಢಾಕಾ(ಬಾಂಗ್ಲಾದೇಶ): ಈಗಾಗಲೇ ಬಾಂಗ್ಲಾ ಅಂತಾರಾಷ್ಟ್ರೀಯ ನ್ಯಾಯಮಂಡಳಿಯಿಂದ ಮರಣದಂಡನೆ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ 26 ವರ್ಷ ಶಿಕ್ಷೆಗೆ ಗುರಿಯಾಗಿರುವ ಬಾಂಗ್ಲಾದೇಶದ ಉಚ್ಚಾಟಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮತ್ತೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಇಂದು 10 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ.
ಸರ್ಕಾರಿ ವಸತಿ ಯೋಜನೆಗಾಗಿ ಭೂ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಾಂಗ್ಲಾದೇಶ ನ್ಯಾಯಾಲಯ ಪದಚ್ಯುತ ಪ್ರಧಾನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
ಢಾಕಾದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಬಿಯುಲ್ ಅಲಂ, ಹಸೀನಾ ಅವರಿಗೆ ಒಟ್ಟು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಪ್ರತಿ ಪ್ರಕರಣದಲ್ಲಿ 5 ವರ್ಷಗಳ ಶಿಕ್ಷೆ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ಪುರ್ಬಚೋಲ್‌ನಲ್ಲಿ ರಾಜುಕ್ ನ್ಯೂ ಟೌನ್ ಯೋಜನೆಯಡಿ ಪ್ಲಾಟ್‌ಗಳ ಹಂಚಿಕೆಯಲ್ಲಿ ನಡೆದ ಅಕ್ರಮಗಳ ಆರೋಪದ ಮೇಲೆ 78 ವರ್ಷದ ಹಸೀನಾ, ಅವರ ಸೋದರಳಿಯ ರದ್ವಾನ್ ಮುಜೀಬ್ ಸಿದ್ದಿಕ್ ಮತ್ತು ಅವರ ಸೊಸೆಯಂದಿರಾದ ತುಲಿಪ್ ರಿಜ್ವಾನಾ ಸಿದ್ದಿಕ್ ಮತ್ತು ಅಜ್ಮಿನಾ ಸಿದ್ದಿಕ್ ಮತ್ತು ಇತರರಿಗೆ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.
ತುಲಿಪ್ ಸಿದ್ದಿಕ್‌ಗೆ 4 ವರ್ಷ ಜೈಲು ಶಿಕ್ಷೆ, ರದ್ವಾನ್ ಮುಜೀಬ್ ಸಿದ್ದಿಕ್ ಮತ್ತು ಅಜ್ಮಿನಾ ಸಿದ್ದಿಕ್‌ಗೆ ಎರಡೂ ಪ್ರಕರಣಗಳಲ್ಲಿ ತಲಾ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ಮುಂದೆ ಶರಣಾದ ಏಕೈಕ ಆರೋಪಿಯಾದ ರಜೂಕ್ ಸದಸ್ಯ ಮೊಹಮ್ಮದ್ ಖುರ್ಷಿದ್ ಆಲಂಗೆ ಪ್ರತಿ ಪ್ರಕರಣದಲ್ಲಿ ಒಂದು ವರ್ಷ ಸೇರಿ ಒಟ್ಟು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ನ್ಯಾಯಾಲಯವು ಎಲ್ಲಾ ಅಪರಾಧಿಗಳಿಗೆ ತಲಾ 1 ಲಕ್ಷ ಬಾಂಗ್ಲಾ ರೂಪಾಯಿ ದಂಡ ವಿಧಿಸಿತು. ದಂಡ ಪಾವತಿ ಮಾಡದಿದ್ದರೆ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಲು ಆದೇಶಿಸಿತು.
2025ರ ಆಗಸ್ಟ್ 5ರಂದು ನಡೆದ ವಿದ್ಯಾರ್ಥಿ ದಂಗೆಯಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿಂದೆ ಬಾಂಗ್ಲಾದ ಸುಪ್ರೀಂ ಕೋರ್ಟ್ ಅವರನ್ನು ದೇಶ ಬಿಟ್ಟು ಓಡಿ ಹೋದ ಪ್ರಧಾನಿ ಎಂದು ಘೋಷಿಸಿದೆ.
ಈ ಹಿಂದಿನ ಶಿಕ್ಷೆಗಳು: ಇದಕ್ಕೂ ಮೊದಲು, ಮಾನವೀಯತೆಯ ವಿರುದ್ಧದ ಅಪರಾಧ ಆರೋಪಕ್ಕಾಗಿ ಶೇಖ್ ಹಸೀನಾರಿಗೆ ಬಾಂಗ್ಲಾದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ(ಐಸಿಟಿ-ಬಿಡಿ) ಮರಣದಂಡನೆ ಘೋಷಿಸಿದೆ. ಅಲ್ಲದೆ, ಭ್ರಷ್ಟಾಚಾರ ಆರೋಪದ ಎರಡು ಪ್ರಕರಣಗಳಲ್ಲಿ ಢಾಕಾ ನ್ಯಾಯಾಲಯ 21 ಮತ್ತು 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
