ಉದಯವಾಹಿನಿ, ಬೆಂಗಳೂರು: ಪೋಷಕರು ಬೈದಿದ್ದಕ್ಕೆ ಸಿಟ್ಟಾಗಿ ಮನೆ ಬಿಟ್ಟು ತೆರಳಿದ್ದ ಮಕ್ಕಳು ಪೊಲೀಸರ ಪ್ರಯತ್ನದಿಂದ ಕೊನೆಗೆ ಮರಳಿ ಮನೆ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. 13 ವರ್ಷದ ಬಾಲಕಿ, 9 ವರ್ಷದ ಬಾಲಕನನ್ನು ಪೋಷಕರು ಟ್ಯೂಷನ್‌ಗೆ ಹಾಕಿದ್ದರು. ಆದರೆ ಮಕ್ಕಳು ಟ್ಯೂಷನ್‌ಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರು. ಮಕ್ಕಳ ಹಠ ಮಾಡಿದ್ದಕ್ಕೆ ಸಿಟ್ಟಾದ ಪೋಷಕರು ಅವರಿಗೆ ಬೈದಿದ್ದರು.
ಪೋಷಕರು ಬೈದಿದ್ದಕ್ಕೆ ನೊಂದು ಫೆ.1ರ ಮಧ್ಯಾಹ್ನ 3 ಗಂಟೆಗೆ ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ಅಕ್ಕ ಮತ್ತು ತಮ್ಮ ಮನೆ ಬಿಟ್ಟು ತೆರಳಿದ್ದಾರೆ. ಬಾಲಕಿ ಮನೆಯಿಂದ ತೆರಳುವಾಗ ಆಧಾರ್ ಕಾರ್ಡ್ ಹಿಡಿದುಕೊಂಡಿದ್ದಳು.
ಬಾಲಕಿಗೆ ಆಧಾರ್ ಕಾರ್ಡ್ ಇದ್ದ ಕಾರಣ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದಾಳೆ. ಬಸ್ಸಿನಲ್ಲಿ ಇವರಿಬ್ಬರು ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿದ್ದಾರೆ.
ಮಕ್ಕಳು ಮನೆಯಿಂದ ನಾಪತ್ತೆಯಾದ ಬೆನ್ನಲ್ಲೇ ಪೋಷಕರು ಹೆಚ್ಎಎಲ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ತಕ್ಷಣ ಅಲರ್ಟ್ ಆದ ಹೆಚ್ಎಎಲ್ ಪೊಲೀಸರು ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಮಾಹಿತಿ ಹಂಚಿಕೊಂಡಿದ್ದರು.
