ಉದಯವಾಹಿನಿ, ಗಾಜಿಯಾಬಾದ್: ಆನ್‌ಲೈನ್ ಗೇಮಿಂಗ್ ವ್ಯಸನಕ್ಕೆ ಮೂವರು ಸಹೋದರಿಯರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಆತ್ಮಹತ್ಯೆಗೂ ಮುನ್ನ ಸಹೋದರಿಯರು ಬರೆದಿಟ್ಟ ಸಣ್ಣ ಡೆತ್ ನೋಟ್ ಪತ್ತೆಯಾಗಿದೆ. ಆನ್‌ಲೈನ್ ಗೇಮಿಂಗ್ ಆಡಬೇಡಿ ಎಂದಿದ್ದಕ್ಕೆ ಉತ್ತರ ಪ್ರದೇಶ ಗಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ವಸತಿ ಪಟ್ಟಣವಾದ ಭಾರತ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಅಷ್ಟು ಹೊತ್ತಿಗಾಗಲೇ ಮೂವರು ಸಹೋದರಿಯರು ಮೃತಪಟ್ಟಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರು ಡೆತ್ ನೋಟ್‌ವೊಂದನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಮಮ್ಮಿ, ಪಾಪಾ, ಕ್ಷಮಿಸಿ. ಕೊರಿಯನ್ (ಆಟ) ನಮ್ಮ ಜೀವನ. ನೀವು ಅದನ್ನ ಆಡಬೇಡಿ ಎಂದಿರಿ. ನಾವು ಅದನ್ನು ಎಷ್ಟು ಪ್ರೀತಿಸುತ್ತಿದ್ದೆವು ಎಂದು ನಿಮಗೆ ಈಗ ಅರಿವಾಗುತ್ತದೆ. ಈ ಡೈರಿಯಲ್ಲಿ ಏನು ಬರೆದಿದದ್ದೇವೋ ಅದನ್ನ ಓದಿ. ಯಾಕೆಂದರೆ ಅದರಲ್ಲಿರುವುದು ಎಲ್ಲವೂ ನಿಜ ಎಂದು ಬರೆಯಲಾಗಿದೆ.
ಇನ್ನು ಘಟನೆ ಸಂಬಂಧ ಮೃತ ಸಹೋದರಿಯರ ತಂದೆ ಚೇತನ್ ಕುಮಾರ್ ಮಾತನಾಡಿ, ನನ್ನ ಮಕ್ಕಳು ಅಪಾಯಕಾರಿ ಆನ್‌ಲೈನ್ ಆಟದಲ್ಲಿ ಸಿಲುಕಿದ್ದಾರೆ ಎಂಬ ಬಗ್ಗೆ ನನಗೆ ಅರಿವಾಗಿಲ್ಲ. ಇದು ಯಾವ ರೀತಿಯ ಆಟ ಎಂದು ನಮಗೆ ತಿಳಿದಿದ್ದರೆ, ನಾವು ಅವರನ್ನು ಎಂದಿಗೂ ಆಡಲು ಬಿಡುತ್ತಿರಲಿಲ್ಲ. ಕಳೆದ ಎರಡು-ಮೂರು ವರ್ಷಗಳಿಂದ ಈ ಆಟವನ್ನು ಆಡುತ್ತಿದ್ದರು. ಅವರು ಕೊರಿಯಾಗೆ ಹೋಗಲು ಬಯಸುತ್ತಾರೆ ಎಂದು ನನಗೆ ಹೇಳುತ್ತಿದ್ದರು. ನಾನು ಅವರನ್ನು ‘ಯಾಕೆ ಕೊರಿಯಾ?’ ಎಂದು ಪ್ರಶ್ನಿಸಿದ್ದೆ. ಆದರೆ ಇದರ ಬಗ್ಗೆ ಸಣ್ಣ ಅನುಮಾನವೂ ಬರಲಿಲ್ಲ. ಮಂಗಳವಾರ ತಡರಾತ್ರಿ ನೀರು ಕುಡಿಯಲು ಅಡುಗೆಮನೆಗೆ ಹೋಗಬೇಕೆಂದು ನನಗೆ ಹೇಳಿದರು. ಬಳಿಕ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!