ಉದಯವಾಹಿನಿ, ಭುವನೇಶ್ವರ (ಒಡಿಶಾ): ಪಂಜಾಬ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಕೈ-ಕಾಲುಗಳಿಲ್ಲದ ಪಾಯಲ್ ನಾಗ್ ಅವರು ಬೆಳ್ಳಿ ಮತ್ತು ಕಂಚಿನ ಪದಕ ಗೆಲ್ಲುವ ಮೂಲಕ ಮತ್ತೊಮ್ಮೆ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ನಡೆಯುತ್ತಿರುವ 7ನೇ ರಾಷ್ಟ್ರೀಯ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕ ಗೆದ್ದ ಕೈ-ಕಾಲುಗಳಿಲ್ಲದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಪಾಯಲ್ ಅವರು ನಿರ್ಮಿಸಿದರು. ಅವರ ಕಠಿಣ ಪರಿಶ್ರಮವೇ ಯಶಸ್ಸಿಗೆ ಕಾರಣವಾಗಿದೆ.
ಪಾಯಲ್ ಅವರು ಬಾಲ್ಯದಲ್ಲಿ ಗಂಭೀರ ವಿದ್ಯುತ್ ಅವಘಡದಲ್ಲಿ ತಮ್ಮ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡರು. ದೇಹದ ಪ್ರಮುಖ ಅಂಗಗಳಿಲ್ಲದೆ ಕ್ರೀಡೆಯಲ್ಲಿ ಸಾಧನೆ ಮಾಡುವುದು ಅಪರೂಪ ಮತ್ತು ಸವಾಲು. ಆದರೆ, ಇದನ್ನು ಪಾಯಲ್ ಅವರು ಮೆಟ್ಟಿನಿಂತು ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಪದಕ ಗೆದ್ದ ವಿಶ್ವದ ಏಕೈಕ ಪ್ಯಾರಾ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪಾಯಲ್ ಸಾಧನೆ ಇತರರಿಗೆ ಸ್ಫೂರ್ತಿ: ಪಾಯಲ್ ನಾಗ್ ಅವರಿಗೆ ಬಿಲ್ವಿದ್ಯೆ ಕಲಿಸಿಕೊಡುತ್ತಿರುವ ತರಬೇತುದಾರ ಕುಲದೀಪ್ ವೇದ್ವಾನ್ ಅವರು ಮಾತನಾಡಿ, “ಅವರ ದೃಢ ನಿರ್ಧಾರ, ಶಿಸ್ತು, ನಿರ್ಭೀತ ಮನಸ್ಥಿತಿ ಮತ್ತು ಸಾಧನೆ ವಿಶ್ವದ ಇತರ ಆಟಗಾರರಿಗೆ ಸ್ಫೂರ್ತಿ ನೀಡುತ್ತದೆ. ಪಾಯಲ್ ಅವರ ಯಶಸ್ಸನ್ನು ಅವರ ದೈಹಿಕ ಊನತೆಯು ತಡೆಯಲು ಸಾಧ್ಯವಾಗಲಿಲ್ಲ. ಅವರ ಈ ಐತಿಹಾಸಿಕ ಸಾಧನೆ ಧೈರ್ಯ ಮತ್ತು ಛಲದ ಪ್ರತೀಕವಾಗಿದೆ. ಇದು ಒಡಿಶಾ ಮತ್ತು ದೇಶಕ್ಕೆ ಅಪಾರ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.
ಪಾಯಲ್ ನಾಗ್ ಯಾರು? ಪಾಯಲ್ ನಾಗ್ ಅವರು ಬಲಂಗೀರ್ ಜಿಲ್ಲೆಯ ಮುರಿಬಹಲ್ ಬ್ಲಾಕ್‌ನ ಜಮುನಾ ಬಹಲ್ ಗ್ರಾಮದ ನಿವಾಸಿ. 2015ರ ಏಪ್ರಿಲ್ 6ರಂದು ಆಟವಾಡುತ್ತಿದ್ದಾಗ ಹೈ-ವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ತಮ್ಮ ಎರಡೂ ಕೈ-ಕಾಲುಗಳನ್ನು ಕಳೆದುಕೊಂಡರು.
ನಂತರ, ಆಕೆಯ ಪೋಷಕರು ಪಾಯಲ್ ನಾಗ್ ಅವರನ್ನು ವಯಸ್ಸಾದ ಅಜ್ಜಿ ಬಳಿ ಬಿಟ್ಟು ಉದ್ಯೋಗಕ್ಕಾಗಿ ಛತ್ತೀಸ್ಗಢಕ್ಕೆ ತೆರಳಿದರು. ಕೆಲ ದಿನಗಳ ನಂತರ ಅಜ್ಜಿಯೂ ಸಾವಿಗೀಡಾದರು. ನಿರಾಶ್ರಿತರಾದ ಪಾಯಲ್ ಅವರನ್ನು ಜಿಲ್ಲಾಡಳಿತವು ರಕ್ಷಿಸಿ ಬಾಲಂಗೀರ್‌ನಲ್ಲಿರುವ ಆಶ್ರಮಕ್ಕೆ ಸೇರಿಸಿತು. ಅಲ್ಲಿಯೇ ಅವರು ಶಿಕ್ಷಣ ಪಡೆದರು.
ಆಕೆಗೆ ಕ್ರೀಡೆಯಲ್ಲದೆ, ಕಲೆಯೂ ಒಲಿದಿದೆ. ಬಣ್ಣದ ಪೆನ್ಸಿಲ್‌ಗಳಿಂದ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ಗುರು ದಿಲೀಪ್ ಸಿಂಗ್ ದಿಯೋ ಅವರಿಂದ ಚಿತ್ರಕಲೆ ಅಭ್ಯಾಸ ಮಾಡಿದ್ದಾರೆ. ಸುಂದರವಾದ ವರ್ಣಚಿತ್ರ ಬಿಡಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸುತ್ತಿದ್ದಾರೆ.
