ಉದಯವಾಹಿನಿ, ಭೋಪಾಲ್‌: ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಮ್ಮ ಧೈರ್ಯ ಹಾಗೂ ಮಕ್ಕಳ ಮೇಲಿನ ಕಾಳಜಿಯಿಂದ ಪ್ರಾಣವನ್ನೇ ಅರ್ಪಿಸಿರುವ ಘಟನೆ ಮಧ್ಯ ಪ್ರದೇಶದ ನೀಮಚ್ ಜಿಲ್ಲೆಯಲ್ಲಿ ನಡೆದಿದೆ. ರಣಪುರ ಗ್ರಾಮದ ಅಂಗನವಾಡಿಯ ಕಾರ್ಯಕರ್ತೆಯ ತ್ಯಾಗದಿಂದ 20 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮದವಾಡ ಪಂಚಾಯತ್‌ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಜೇನು ನೊಣಗಳ ಹಿಂಡು ಇದ್ದಕ್ಕಿದ್ದಂತೆ ದಾಳಿ ನಡೆಸಿದೆ. ಆ ವೇಳೆ ಅಂಗನವಾಡಿಯಲ್ಲಿ ಅಡುಗೆ ಕಾಯಕ ಮಾಡುವ ಕಾಂಚನ್ ಬಾಯಿ ಮೇಘವಾಲ್, ತನ್ನ ಸುರಕ್ಷತೆಯ ಬಗ್ಗೆ ಯೋಚಿಸದೆ ಕೂಡಲೇ ಹತ್ತಿರದಲ್ಲಿ ಬಿದ್ದಿದ್ದ ಟಾರ್ಪಲ್‌ಗಳು ಮತ್ತು ಚಾಪೆಗಳನ್ನು ಹಿಡಿದುಕೊಂಡರು. ಒಬ್ಬೊಬ್ಬರಾಗಿ, ಮಕ್ಕಳನ್ನು ಅದರಲ್ಲಿ ಸುತ್ತಿ, ತಾವು ಅಡ್ಡ ನಿಂತು ಅವರನ್ನು ರಕ್ಷಿಸಿಕೊಂಡು ಅಂಗನವಾಡಿಯ ಒಳಗೆ ಕಳುಹಿಸಿದರು.

ಜೇನುನೊಣಗಳು ಮಕ್ಕಳಿಗೆ ಏನೂ ಮಾಡದಂತೆ ಕಾಂಚನ್ ಬಾಯಿ ಕಲ್ಲುಬಂಡೆಯಂತೆ ಅಡ್ಡ ನಿಂತಿದ್ದರಿಂದ ಆ ಹಿಂಡು ಅವರ ಮೇಲೆ ದಾಳಿ ಮಾಡಿತು. ನೂರಾರು ಜೇನು ನೊಣಗಳು ಕಚ್ಚಿದವು. ಆದರೂ ಮಕ್ಕಳು ಸುರಕ್ಷಿತರಾಗಿ ಒಳಗೆ ಹೋಗುವವರೆಗೂ ಅವರು ಹಿಂದೆ ಸರಿಯಲಿಲ್ಲ. ಗ್ರಾಮಸ್ಥರು ಸಹಾಯಕ್ಕೆ ಧಾವಿಸುವ ಹೊತ್ತಿಗೆ ಕಾಂಚನ್ ಬಾಯಿ ಕುಸಿದು ಬಿದ್ದಿದ್ದರು. ಕಾನ್‌ಸ್ಟೇಬಲ್ ಕಲುನಾಥ್ ಮತ್ತು ಪೈಲಟ್ ರಾಜೇಶ್ ರಾಥೋಡ್ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.

Leave a Reply

Your email address will not be published. Required fields are marked *

error: Content is protected !!