ಉದಯವಾಹಿನಿ, ತರಣ್ ತರಣ್ (ಪಂಜಾಬ್): ಹುತಾತ್ಮ ಭಗತ್ ಸಿಂಗ್ ಅವರನ್ನು ಲಾಹೋರ್ ಜೈಲಿನಲ್ಲಿ ಭೇಟಿಯಾಗಿದ್ದಾಗಿ ಹೇಳಿಕೊಳ್ಳುವ 126 ವರ್ಷದ ವೃದ್ಧರೊಬ್ಬರು ಇಂದಿಗೂ ಆರೋಗ್ಯಕರ ಜೀವನ ನಡೆಸುತ್ತಿದ್ದು, ತಮ್ಮ ಅಂದಿನ ದಿನಗಳ ಕಥೆಗಳನ್ನು ಹೇಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ತರಣ್ ತರಣ್ ಜಿಲ್ಲೆಯ ವಾನ್ ತಾರಾ ಸಿಂಗ್ ಗ್ರಾಮದ ನಿವಾಸಿ ಬುರ್ ಸಿಂಗ್ ಹೇಳುವಂತೆ ಅವರಿಗೆ ಈಗ 126 ವರ್ಷ. ಅವರು ತಮ್ಮ ಯೌವನದ ಕಾಲದಲ್ಲಿ ಲಾಹೋರ್ ಜೈಲಿನಲ್ಲಿ ಹುತಾತ್ಮ ಭಗತ್ ಸಿಂಗ್ ಅವರನ್ನು ಸಹ ಭೇಟಿಯಾಗಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ.
ಶಹೀದ್ ಭಗತ್ ಸಿಂಗ್ ಹೇಗಿದ್ದರು?: ಸಿಂಗ್ ಅವರು ಹೇಳಿಕೊಳ್ಳುವಂತೆ ಭಗತ್ ಸಿಂಗ್ ಅವರು ಸುಂದರವಾದ ಮೈಬಣ್ಣದ ಜೊತೆಗೆ ತೆಳ್ಳಗಿನ ದೇಹ ಮತ್ತು ದೊಡ್ಡ ಕಣ್ಣುಗಳನ್ನು ಹೊಂದಿದ್ದರು. ಭಗತ್ ಸಿಂಗ್ ಮತ್ತು ಅವರ ಸಹಚರರನ್ನು ಗಲ್ಲಿಗೇರಿಸಿದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಯಿತು. ಅವರ ಕಾಲದಲ್ಲಿ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗಲು ಕುದುರೆಗಳನ್ನು ಬಳಸಲಾಗುತ್ತಿತ್ತು. ತಮ್ಮ ಹಾಗೂ ಭಗತ್ ಸಿಂಗ್ ಅವರೊಂದಿಗಿನ ಭೇಟಿಯನ್ನು ಅವರ ಹಿರಿಯ ಸಹೋದರ ಚನ್ನನ್ ಸಿಂಗ್ ರಾರಾ ಏರ್ಪಡಿಸಿದ್ದರು ಎಂದು ತಿಳಿಸಿದ್ದಾರೆ.
1847ರಲ್ಲಿ ನಡೆದ ದೇಶ ವಿಭಜನೆ ಘಟನೆಯ ಕುರಿತು ಮಾತನಾಡಿದ ಅವರು, ಈ ವಿಭಜನೆಯಿಂದಾಗಿ ಅನೇಕ ಕುಟುಂಬಗಳು ದೂರಾದವು ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ವಿಭಜನೆಗೆ ಮೊದಲು ಅವರು ಪಾಕಿಸ್ತಾನಿಯೊಬ್ಬರನ್ನು ವಿವಾಹವಾಗಿದ್ದಾಗಿ ತಿಳಿಸಿದ್ದಾರೆ.
ಇವುಗಳೇ ತಾತನ ದೀರ್ಘಾಯುಷ್ಯಕ್ಕೆ ಕಾರಣವಂತೆ?: ಬುರ್ ಸಿಂಗ್ 126 ವರ್ಷವಾದರೂ ಆರೋಗ್ಯವಾಗಿದ್ದು, ತಮ್ಮ ದೀರ್ಘಾಯುಷ್ಯದ ರಹಸ್ಯವನ್ನು ಬಯಲು ಮಾಡಿದ್ದಾರೆ. ದೇಸಿ ಹಸು ತುಪ್ಪ, ಹಾಲು, ಕ್ರೀಮ್, ಎಳ್ಳು, ಬಾದಾಮಿ ಮತ್ತು ಕಸ್ತೂರಿ ಇತ್ಯಾದಿಗಳನ್ನು ನಾನು ನಿತ್ಯವೂ ಬಳಸುತ್ತೇನೆ. ಇದುವೇ ನನ್ನ ದೀರ್ಘಾಯುಷ್ಯಕ್ಕೆ ಕಾರಣ ಇರಬಹುದು ಎಂದು ಹೇಳಿಕೊಂಡಿದ್ದಾರೆ. ನಾನೀಗ ನನ್ನೆಲ್ಲ ಸ್ನೇಹಿತರನ್ನ ಕಳೆದುಕೊಂಡಿದ್ದೇನೆ: ತಮ್ಮ ಕುಟುಂಬದ 6 ತಲೆಮಾರುಗಳನ್ನು ನೋಡಿರುವುದಾಗಿ ಹೇಳುವ ಸಿಂಗ್ ತಮ್ಮ ಎಲ್ಲಾ ಸ್ನೇಹಿತರನ್ನು ಕಳೆದುಕೊಂಡಿದ್ದಾರಂತೆ. ಪಾಕಿಸ್ತಾನದ ನಂಕಾನಾ ಸಾಹಿಬ್‌ಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಸಹಿವಾಲ್, ಮುಲ್ತಾನ್, ಕಾಬೂಲ್ ಮತ್ತು ಕಂದಹಾರ್ ಅನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಹೀಗಿರುತ್ತೆ ಇವರ ದಿನಚರಿ: ತಮ್ಮ ದೀರ್ಘಾಯುಷ್ಯದ ರಹಸ್ಯವನ್ನು ಉತ್ತಮ ಆಹಾರ ಪದ್ಧತಿ ಎಂದಿರುವ ಅವರು ಇಂದಿಗೂ ಬೆಳಗ್ಗೆ ಎದ್ದು ಹಾಲಿನೊಂದಿಗೆ ಪಂಜಿರಿ ತಿನ್ನುತ್ತೇನೆ. ಹಲವು ಕಾಲದಿಂದ ಗುಲಾಬಿ ಚಹಾ ಕುಡಿಯುತ್ತಿದ್ದು, ಇದೀಗ ತಮಗೆ ಕಪ್ಪು ಚಹಾ ಕುಡಿಯುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
