ಉದಯವಾಹಿನಿ, ಹೈದರಾಬಾದ್: ಅನಾರೋಗ್ಯಗೊಂಡ ತಮ್ಮ ಮುದ್ದಿನ ಸಾಕು ಬೆಕ್ಕಿನ ಆರೈಕೆಯನ್ನು ಸರಿಯಾಗಿ ಮಾಡದೆ, 1 ಲಕ್ಷ ರೂಪಾಯಿ ಬಿಲ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪಶು ವೈದ್ಯರು ತಮ್ಮ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಚೈತನ್ಯಪುರಿ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಇನ್ಸ್ಪೆಕ್ಟರ್ ಸೈದುಲು, ಹೈದರಾಬಾದ್ನ ಎನ್ಜಿಒ ಕಾಲೋನಿಯ ಪೆಂಡ್ಯಲಾ ಶಾಂಭವಿ ದೇವಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಶಾಂಭವಿ ಕಳೆದ ಮೂರು ವರ್ಷಗಳಿಂದ ಈ ಬೆಕ್ಕನ್ನು ಸಾಕುತ್ತಿದ್ದು, ಇದು ಕಳೆದ ವರ್ಷದ ಆಗಸ್ಟ್ನಲ್ಲಿ ಅನಾರೋಗ್ಯಕ್ಕೆ ಒಳಗಾಗಿತ್ತು. ಅದರ ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರು, ರಾಮಕೃಷ್ಣಪುರಂ ಬಳಿಯ ಅಲಕಾಪುರಿಯಲ್ಲಿ ಸ್ನಿಫರ್ಸ್ ಪೆಟ್ ಕ್ಲಿನಿಕ್ಗೆ ಭೇಟಿ ನೀಡಿದ್ದರು.
ಕ್ಲಿನಿಕ್‌ನ ಪಶುವೈದ್ಯ ಕ್ರಾಂತಿ ಕುಮಾರ್, ಬೆಕ್ಕನ್ನು ಪರೀಕ್ಷಿಸಿ, ಅದು ಮೂತ್ರನಾಳಕ್ಕೆ ಸಮಸ್ಯೆಯಿಂದ ಬಳಲುತ್ತಿದೆ ಎಂದು ತಿಳಿಸಿದ್ದರು. ಶಾಂಭವಿ ಅವರ ಒಪ್ಪಿಗೆ ಬಳಿಕ ಬೆಕ್ಕಿಗೆ ನಾಲ್ಕು ಶಸ್ತ್ರಚಿಕಿತ್ಸೆಗಳನ್ನು ಮಾಡಿದರು. ಚಿಕಿತ್ಸೆಯ ಅವಧಿಯಲ್ಲಿ, ಸುಮಾರು 1ಲಕ್ಷ ರೂ.ಗಳ ಶುಲ್ಕವನ್ನು ಪಾವತಿಸುವಂತೆ ತಿಳಿಸಿದ್ದರು. ಅದರಂತೆ ಅಷ್ಟು ಮೊತ್ತವನ್ನು ಪಾವತಿಸಲಾಗಿತ್ತು.
ಇಷ್ಟೆಲ್ಲಾ ಚಿಕಿತ್ಸೆಯ ನಡುವೆ ಮತ್ತೆ ಬೆಕ್ಕಿನ ಸ್ಥಿತಿ ಹದಗೆಟ್ಟಿತು. ಈ ವೇಳೆ ಆತಂಕಗೊಂಡ ಅವರು ಕಳೆದ ಜನವರಿ 31ರಂದು ಪಶುವೈದ್ಯರಿಗೆ ಕರೆ ಮಾಡಿ, ಪರಿಸ್ಥಿತಿ ವಿವರಿಸಿದ್ದರು. ಈ ವೇಳೆ ಕ್ರಾಂತಿ ಕುಮಾರ್, ತಮ್ಮೊಂದಿಗೆ ಅಸಭ್ಯವಾಗಿ ಮಾತನಾಡಿದ್ದು, ಮತ್ತೆ ಬೆಕ್ಕಿಗೆ ಚಿಕಿತ್ಸೆ ನೀಡುವುದಿಲ್ಲ ಅಂತಾ ಹೇಳಿದರು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣದ ಆಧಾರದ ಮೇಲೆ ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ವೈದ್ಯಕೀಯ ನಿರ್ಲಕ್ಷ್ಯ, ಕಿರುಕುಳ ಮತ್ತು ಬೆದರಿಕೆ ದೂರಿನ ಆಧಾರದ ಮೇಲೆ ಚೈತನ್ಯಪುರಿ ಪೊಲೀಸರು ಪಶುವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಚಿಕಿತ್ಸೆಗೆ ಅಪಾರ ಹಣ ಖರ್ಚು ಮಾಡಿದರೂ ತಮ್ಮ ಬೆಕ್ಕು ಇನ್ನೂ ಅಸ್ವಸ್ಥವಾಗಿಯೇ ಇದೆ ಎಂದು ಬೇಸರ ವ್ಯಕ್ತಪಡಿಸಿರುವ ಶಾಂಭವಿ ದೇವಿ, ಪಶುವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಅದರ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
