ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಗಮನಿಸುತ್ತಿರುವಂತೆ ಅಕಾಲಿಕ ಮರಣಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಮೂಲ ಕಾರಣ ಯಾವುದು ಎಂದು ಗಮನಿಸಿದಾಗ ನಮಗೆ ಕಂಡುಬರುವ ಮೊದಲನೇ ಅಂಶವೇ ನಮ್ಮ ಅಸಮತೋಲಿತ ಜೀವನಶೈಲಿ. ಬೆಳಗ್ಗೆ ತಡವಾಗಿ ಏಳುವುದು, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು, ಜಂಕ್ ಫುಡ್ ಸೇವನೆ, ಸರಿಯಾಗಿ ನೀರನ್ನು ಕುಡಿಯದಿರುವುದು, ತಡವಾಗಿ ನಿದ್ರಿಸುವುದು, ಹೆಚ್ಚು ಸ್ಟ್ರೀನ್ ಬಳಕೆ ಮಾಡುವುದು, ದೇಹಕ್ಕೆ ಯಾವುದೇ ವ್ಯಾಯಾಮ ಇಲ್ಲದಿರುವುದು ಇತ್ಯಾದಿ.
ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ, ಸುದೀರ್ಘವಾಗಿ ಮತ್ತು ಆರೋಗ್ಯಕರವಾಗಿ ಜೀವನ ನಡೆಸಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಮಾನವನ ದೇಹವು ಪ್ರಕೃತಿಯ ನಿಯಮಗಳೊಂದಿಗೆ ಹೊಂದಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯವನ್ನು ದೀರ್ಘಕಾಲ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ‘ಧರ್ಮಾರ್ಥ ಕಾಮ ಮೋಕ್ಷಾಣಾಂ ಆರೋಗ್ಯಂ ಮೂಲಮುತ್ತಮಂ’ ಎನ್ನುವ ಮಾತಿನಂತೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಸಾಧಿಸಲು ಆರೋಗ್ಯವೇ ಅತ್ಯಂತ ಶ್ರೇಷ್ಠವಾದ ಮೂಲಾಧಾರವಾಗಿದೆ. ನಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಉತ್ತಮ ಆಹಾರ, ದೈಹಿಕ ಚಟುವಟಿಕೆ, ಉತ್ತಮ ನಿದ್ರೆ, ಮಾನಸಿಕ ಆರೋಗ್ಯ ಮುಖ್ಯ ಪಾತ್ರವಹಿಸುತ್ತದೆ.
ಉತ್ತಮ ಆಹಾರ ಸೇವನೆ: ಈ ದೀರ್ಘಾಯುಷ್ಯಕ್ಕೆ ಮೊದಲ ಮೆಟ್ಟಿಲು ಯಾವುದೆಂದರೆ ನಾವು ಸೇವಿಸುವ ಆಹಾರ.
ಅಸಮಯದ ಆಹಾರ ಸೇವನೆ ದೇಹ ಮತ್ತು ಮನಸ್ಸಿನ ಆರೋಗ್ಯದ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತದೆ. ಒಬ್ಬ ಮನುಷ್ಯನು ತನಗೆ ಹಸಿವಾದಾಗ ಮಾತ್ರ ಆಹಾರವನ್ನು ಸೇವಿಸಬೇಕು ಮತ್ತು ರಾತ್ರಿ ಮಲಗುವ ಕನಿಷ್ಠ ಎರಡರಿಂದ ಮೂರು ಗಂಟೆಯ ಮೊದಲು ಲಘು ಆಹಾರವನ್ನು ಸೇವನೆ ಮಾಡಬೇಕು. ನಮ್ಮ ಜಠರದ ಅರ್ಧ ಪ್ರಮಾಣದಷ್ಟು ಘನ ಆಹಾರವನ್ನು ಮತ್ತು ಕಾಲು ಭಾಗದಷ್ಟು ದ್ರವ ಆಹಾರವನ್ನು ಸೇವಿಸಿ ಉಳಿದ ಭಾಗವನ್ನು ಖಾಲಿ ಬಿಡುವುದರಿಂದ ನಮ್ಮ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ದೇಹದಲ್ಲಿ ವಿಷಕಾರಿ ಅಂಶಗಳು ಶೇಖರಣೆಯಾಗುವುದಿಲ್ಲ. ಆದಷ್ಟು ಸಂಸ್ಕರಿಸಿದ ಆಹಾರ, ನಾರಿನಂಶವಿರುವ ತರಕಾರಿ, ಹಣ್ಣು ಮತ್ತು ಧಾನ್ಯಗಳನ್ನು ಸೇವಿಸಬೇಕು. ಪ್ರತಿನಿತ್ಯದ ಆಹಾರ ಸೇವನೆಯಲ್ಲಿ ಸಮತೋಲನ ಆಹಾರವನ್ನು ಸೇವಿಸುವ ಅಭ್ಯಾಸ ಬಹಳ ಉತ್ತಮ. ಸಕ್ಕರೆ ಪಾನೀಯಗಳನ್ನು ಕಡಿಮೆ ಮಾಡುವುದು ಆರೋಗ್ಯಕ್ಕೆ ಹಿತಕರ.
