ಉದಯವಾಹಿನಿ, ಅರ್ಟಿಕೇರಿಯ, ಅಲರ್ಜಿಗೆ ಸಂಬಂಧಿಸಿದ ಒಂದು ಸಾಮಾನ್ಯ ಚರ್ಮಸಮಸ್ಯೆ. ಅಲರ್ಜಿ ಅಥವಾ ಅತಿಸೂಕ್ಷ್ಮತೆ ಇರುವವರಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಅಂದರೆ ಇಂಥ ವ್ಯಕ್ತಿಗಳು ಕೆಲವು ವಸ್ತುಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ. ಇಂಥ ಪ್ರಚೋದನಾತ್ಮಕ ವಸ್ತುಗಳ ಸಂಪರ್ಕಕ್ಕೆ ಬಂದಾಗ ಇವರಲ್ಲಿಎಂಬ ಆ್ಯಂಟಿಬಾಡಿಗಳು ಹೆಚ್ಚಾಗಿ ಉತ್ಪತ್ತಿಯಾಗಿ ಅವು ರಕ್ತದಲ್ಲಿರುವ ಬೇಸೋಫಿಲ್ ಗಳೆಂಬ ಬಿಳಿರಕ್ತಕಣಗಳನ್ನೂ ಚರ್ಮ, ಶ್ವಾಸಾಂಗಗಳು, ಜೀರ್ಣಾಂಗಗಳು, ಮೊದಲಾದ ಅಂಗಾಂಗಗಳಲ್ಲಿರುವ ಮಾಸ್ಟ್ ಸೆಲ್ ಗಳೆಂಬ ಜೀವಕೋಶಗಳನ್ನೂ ಬಡಿದು ಅವುಗಳಿಂದ ಹಿಸ್ಟಮಿನ್, ಲ್ಯುಕೋಟ್ರಿನ್ ಮೊದಲಾದ ರಾಸಾಯನಿಕಗಳು ಬಿಡುಗಡೆಯಾಗಿ ರಕ್ತನಾಳಗಳನ್ನು ಹಿಗ್ಗಿಸುತ್ತವೆ ಹಾಗೂ ನರಗಳನ್ನು ಪ್ರಚೋದಿಸುತ್ತವೆ. ಇದರಿಂದ ರಕ್ತ ಹೆಚ್ಚಾಗಿ ಹರಿದು, ಅದರಲ್ಲಿನ ನೀರಿನಂಶ ಹೊರಚೆಲ್ಲಿ ಕೆಂಪು ಬಣ್ಣ, ಹಾಗೂ ಊತಗಳಾಗುತ್ತವೆ.
ನರಗಳ ಪ್ರಚೋದನೆಯಿಂದ ಕೆಂಪು ಬಣ್ಣ ಸುತ್ತಲೂ ಹರಡಿ, ಬಹಳ ತುರಿಕೆಯುಂಟಾಗುತ್ತದೆ. ಈ ಖಾತೆಗಳಿಗೆ ವೀಲ್ ಗಳೆಂದು ಕರೆಯುತ್ತಾರೆ.ಕನ್ನಡದಲ್ಲಿ ಇವನ್ನು ಗಂಧೆಗಳು ಅಥವಾ ದದ್ದುಗಳು ಎನ್ನುತ್ತಾರೆ. ಈ ಗಂಧೆಗಳು ಸ್ವಲ್ಪ ಹೊತ್ತು ಇದ್ದು ಹೊರಟುಹೋಗುತ್ತವೆ. ಸಾಮಾನ್ಯವಾಗಿ ಒಂದರಿಂದ ಇಪ್ಪತ್ತು ನಾಲ್ಕು ಗಂಟೆಗಳೊಳಗೆ ಹೊರಟುಹೋಗುತ್ತವೆ. ಅನಂತರ ಮತ್ತೆ ಮತ್ತೆ ಬರುತ್ತಿರುತ್ತವೆ.
ಈ ಅರ್ಟಿಕೇರಿಯಾಗೆ ಕಾರಣವಾಗುವ ಪ್ರಚೋದನಾತ್ಮಕ ವಸ್ತುಗಳು ಹಲವಾರಿರುತ್ತವೆ. ಅವು ಆಹಾರ ಪದಾರ್ಥಗಳಿರಬಹುದು ( ಸಾಮಾನ್ಯವಾಗಿ ಮೊಟ್ಟೆ, ಮೀನು, ಬೀಜಗಳು ಇತ್ಯಾದಿ), ಉಸಿರಿನಲ್ಲಿ ತೆಗೆದುಕೊಳ್ಳುವಂಥವು ( ದೂಳು, ಮನೆ ಧೂಳಿನಲ್ಲಿರುವ ನುಸಿ ಎಂಬ ಕೀಟ, ಹೂವಿನ ಪರಾಗ, ಅನಿಲಗಳು ಇತ್ಯಾದಿ), ಔಷಧಿಗಳು, ಮೊದಲಾದವು. ಕೀಟಗಳ ಕಚ್ಚುವಿಕೆ, ಕರುಳಿನಲ್ಲಿ ವಾಸಿಸುವ ಜಂತು ಹುಳು, ಕೊಕ್ಕೆ ಹುಳು, ಮೊದಲಾದ ಹುಳುಗಳು, ಸೋಂಕು ರೋಗಗಳಿಗೆ ಕಾರಣವಾಗುವ ಬ್ಯಾಕ್ಟಿರಿಯಾ ಮುಂತಾದವುಗಳೂ ಅಲರ್ಜಿಯನ್ನು ಪ್ರಚೋದಿಸುತ್ತವೆ.
ಇವಲ್ಲದೇ, ಚರ್ಮದ ಸ್ಪರ್ಶಕ್ಕೆ ಬರುವ ಕೂದಲ ಬಣ್ಣ, ಸೌಂದರ್ಯ ವರ್ಧಕಗಳು, ಅಂಗರಾಗ ದ್ರವ್ಯಗಳು, ಪ್ರಾಣಿಗಳ ಕೂದಲು ಮತ್ತು ಹೊಟ್ಟು, ಇವೆಲ್ಲವೂ ಸ್ಥಳೀಯವಾಗಿ ಅರ್ಟಿಕೇರಿಯ ಉಂಟುಮಾಡುತ್ತವೆ. ಇವಲ್ಲದೇ ಭೌತಿಕ ಅಂಶಗಳಾದ ಚಳಿ, ಸೆಖೆ, ಬಿಸಿಲು, ನೀರು, ಮೈ ಮೇಲಿನ ಒತ್ತಡ, ಶ್ರಮ ಮತ್ತು ವ್ಯಾಯಾಮ, ಇವೂ ಕೂಡ ಕೆಲವೊಮ್ಮೆ ಅರ್ಟಿಕೇರಿಯಾವನ್ನು ಪ್ರಚೋದಿಸಬಹುದು.
ಕೆಲವರಿಗೆ ವ್ಯಾಯಾಮ, ಶ್ರಮಗಳಾದಾಗ ಹಾಗೂ ಅತಿ ಖಾರ ಪದಾರ್ಥಗಳನ್ನು ಸೇವಿಸಿದಾಗ ಮೈಯಲ್ಲಿ ಬಿಸಿಯೇರಿ ನರಗಳ ತುದಿಗಳಿಂದ ಒಸರುವ ಅಸಿಟೈಲ್ ಕೋಲೀನ್ ದ್ರವ ಹೆಚ್ಚಿ ಅದೂ ಇದನ್ನು ಪ್ರಚೋದಿಸುತ್ತದೆ. ಇದನ್ನು ಕೋಲಿನರ್ಜಿಕ್ ಅರ್ಟಿಕೇರಿಯ ಎನ್ನುತ್ತಾರೆ. ಅಪರೂಪವಾಗಿ ಕೆಲವರಿಗೆ ಆಟೋ ಆಂಟಿಬಾಡಿಗಳು ಉತ್ಪತ್ತಿಯಾಗಿ ಇವು ಅವರ IgE ಆ್ಯಂಟಿಬಾಡಿಗಳನ್ನು ಮಾಸ್ಟ್ ಸೆಲ್ ಗಳನ್ನೂ ಬೇಸೋಫಿಲ್ ಗಳನ್ನೂ ಪ್ರಚೋದಿಸಿ ಅರ್ಟಿಕೇರಿಯ ಉಂಟಾಗುತ್ತದೆ. ಇದನ್ನು ಆಟೋ ಇಮ್ಯೂನ್ ಅರ್ಟಿಕೇರಿಯ ಎನ್ನುತ್ತಾರೆ.
