ಉದಯವಾಹಿನಿ, ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಕೊಲೆ ಆರೋಪ ಹೊತ್ತ ಸುಮಾರು 100 ವರ್ಷದ ವ್ಯಕ್ತಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು (ಗುರುವಾರ) ಖುಲಾಸೆಗೊಳಿಸಿತು.”ಈ ವ್ಯಕ್ತಿ ತನಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಸಮಯ ಕಳೆದಿದ್ದು, ಪರಿಹಾರ ನೀಡಲು ಅವರು ಅನುಭವಿಸಿದ ಸಾಮಾಜಿಕ ಪರಿಣಾಮಗಳನ್ನು ನಿರ್ಲಕ್ಷಿಸಲಾಗದು” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಚಂದ್ರ ಧಾರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಮೇಲ್ಮನವಿಯ ದೀರ್ಘಾವಧಿಯ ವಿಚಾರಣೆ ಮತ್ತು ಆರೋಪಿ ಧಾಮಿ ರಾಮ್ ಅವರ ವಯಸ್ಸೂ ಕೂಡಾ ಪರಿಹಾರ ನೀಡುವಾಗ ಪ್ರಸ್ತುತವಾಗುತ್ತದೆ ಎಂದು ತಿಳಿಸಿತು.

“ಒಬ್ಬ ವ್ಯಕ್ತಿ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ನ್ಯಾಯಾಲಯದ ಕಟೆಕಟೆಯಲ್ಲಿ ನಿಂತು, ದಶಕಗಳ ಕಾರ್ಯವಿಧಾನದ ವಿಳಂಬದ ನಂತರ ಶಿಕ್ಷೆಯ ಪರಿಣಾಮಗಳನ್ನು ಹೇಳುತ್ತಿದ್ದಾರೆ. ಇದು ನ್ಯಾಯ ವಿತರಣೆಯ ಮೂಲ ಉದ್ದೇಶವಲ್ಲ” ಎಂದು ನ್ಯಾಯಾಲಯ ಮುಖ್ಯವಾಗಿ ಗಮನಿಸಿದೆ.

ಪ್ರಕರಣವೇನು?: ಈ ಕೊಲೆ ಪ್ರಕರಣ 1982ರ ಭೂ ವಿವಾದಕ್ಕೆ ಸಂಬಂಧಿಸಿದ್ದು. ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಸಾಯಿಸಿದ ಪ್ರಕರಣದಲ್ಲಿ ಮೈಕು, ಸತ್ತಿ ದಿನ್ ಮತ್ತು ಧನಿ ರಾಮ್ ಎಂಬ ಮೂವರು ಆರೋಪಿಗಳು. ಮೈಕು ಪೊಲೀಸರಿಗೆ ಸಿಕ್ಕಿಲ್ಲ. ಪ್ರಕರಣದ ವಿಚಾರಣೆ ನಡೆದು ಹಮೀರ್‌ಪುರ ಸೆಷನ್ಸ್ ನ್ಯಾಯಾಲಯ 1984ರಲ್ಲಿ ಸತ್ತಿ ದಿನ್ ಮತ್ತು ರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದೇ ವರ್ಷ ರಾಮ್ ಜಾಮೀನಿನ ಮೇಲೆ ಬಿಡುಗಡೆಯಾದರು. ಸತ್ತಿ ದಿನ್ ಎಂಬವರು ಮೇಲ್ಮನವಿ ವಿಚಾರಣೆಯ ಹಂತದಲ್ಲಿದ್ದಾಗ ನಿಧನರಾದರು. ಇದರಿಂದಾಗಿ ರಾಮ್ ಪ್ರಕರಣದಲ್ಲಿ ಉಳಿದಿರುವ ಏಕೈಕ ಮೇಲ್ಮನವಿದಾರರಾದರು.
ಮೇಲ್ಮನವಿ ವಿಚಾರಣೆಯ ವೇಳೆ ಹೈಕೋರ್ಟ್, ಈ ಆರೋಪಿಯನ್ನು ಖುಲಾಸೆಗೊಳಿಸುವುದು ಪ್ರಕರಣದ ಅರ್ಹತೆಯನ್ನು ಆಧರಿಸಿದೆ. ನಿರ್ದಿಷ್ಟವಾಗಿ ಆರೋಪಗಳನ್ನು ಅನುಮಾನರಹಿತವಾಗಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಕೂಡಾ ವಿಫಲವಾಗಿದೆ ಎಂದಿತು. ಇದರ ಜತೆಗೆ, ನ್ಯಾಯ ನಿರ್ಣಯಿಸುವಾಗ ಆರೋಪಿಗಳು ದಶಕಗಳಿಂದ ಅನುಭವಿಸಿದ ಆತಂಕ, ಅನಿಶ್ಚಿತತೆ ಮತ್ತು ಸಾಮಾಜಿಕ ಪರಿಣಾಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.ರಾಮ್ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಸುಮಾರು 100 ವರ್ಷ ವಯಸ್ಸಾಗಿದೆ. ಸುಮಾರು 40 ವರ್ಷಗಳನ್ನು ಅವರು ಜಾಮೀನಿನ ಮೇಲೆ ಕಳೆದಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತನ ಮೇಲೆ ಗುಂಡು ಹಾರಿಸಲು ಪ್ರೇರೇಪಿಸಿದ ಆರೋಪ ಮಾತ್ರ ಇವರ ಮೇಲಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!