ಉದಯವಾಹಿನಿ, ಭುವನೇಶ್ವರ (ಒಡಿಶಾ): ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟ ಚೆನ್ನೈ- ನ್ಯೂ ಜಲ್ಪೈಗುರಿ ಎಕ್ಸ್ಪ್ರೆಸ್ ರೈಲಿನ ಮೂರು ಬೋಗಿಗಳು ಇಂದು ಬೆಳಗ್ಗೆ ಹಳತಪ್ಪಿದ ಘಟನೆ ಜಾಖಾಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
ಇಂದು ಬೆಳಗ್ಗೆ 8.51 ರ ಸುಮಾರಿಗೆ ಜಾಖಾಪುರ ನಿಲ್ದಾಣದ ಮೂಲಕ ಹಾದುಹೋಗುತ್ತಿದ್ದ ಸಮಯದಲ್ಲಿ ರೈಲಿನ ಒಂದು ಎಸಿ ಕೋಚ್ ಮತ್ತು ಎರಡು ಸಾಮಾನ್ಯ ಕೋಚ್ ಸೇರಿ ಒಟ್ಟು ಮೂರು ಬೋಗಿಗಳು ಹಳಿತಪ್ಪಿವೆ. ಘಟನೆಯ ಸಮಯದಲ್ಲಿ ರೈಲು ತುಂಬಾ ನಿಧಾನಗತಿಯಲ್ಲಿ ಚಲಿಸುತ್ತಿತ್ತು. ಹಾಗಾಗಿ ಪ್ರಯಾಣಿಕರಿಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ತಿಳಿಸಿದೆ.
ಘಟನೆ ನಡೆದ ತಕ್ಷಣ ಪರಿಸ್ಥಿತಿ ನಿಭಾಯಿಸಲು ಭದ್ರಕ್ನಿಂದ ರಕ್ಷಣಾ ಮತ್ತು ಮರುಸ್ಥಾಪನೆ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗಿದ್ದು, ತೊಂದರೆಗೊಳಗಾದ ಬೋಗಿಗಳನ್ನು ಬೇರ್ಪಡಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ಅಗತ್ಯವಿರುವಂತೆ ಹೆಚ್ಚುವರಿ ಬೋಗಿಗಳನ್ನು ರೈಲಿಗೆ ಜೋಡಿಸಲಾಗುತ್ತದೆ” ಎಂದು ಇಸಿಒಆರ್ ಹೇಳಿಕೆಯಲ್ಲಿ ತಿಳಿಸಿದೆ.
“ಹಳಿತಪ್ಪಲು ಕಾರಣ ಇನ್ನೂ ತಿಳಿದು ಬಂದಿಲ್ಲ, ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದು, ಪುನಃಸ್ಥಾಪನೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೆಚ್ಚಿನ ವಿವರಗಳು ಲಭ್ಯವಾದಂತೆ ಹಂಚಿಕೊಳ್ಳಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲುಗಳು ಹಳಿ ತಪ್ಪುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಈ ಬಗ್ಗೆ ರೈಲ್ವೆ ಇಲಾಖೆ ಕಟ್ಟು ನಿಟ್ಟಿನ ಕ್ರಮಕೈಗೊಂಡರು, ಹಳಿ ತಪ್ಪುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಕಳೆದ ಅಕ್ಟೋಬರ್ ನಲ್ಲಿ ಮಥುರಾದಲ್ಲಿ ಗೂಡ್ಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದ್ದವು. ಈ ಸರಕು ಸಾಗಾಣಿಕ ರೈಲು ಆಗ್ರಾದಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಆಗ್ರಾದಿಂದ ದೆಹಲಿ – ಘಾಜಿಯಾಬಾದ್‌ಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಸರಕು ರೈಲು ಛತಿಕರ್ ಬಳಿ ಹಠಾತ್ತನೆ ಹಳಿತಪ್ಪಿತ್ತು. ಗೂಡ್ಸ್ ಹಳಿ ತಪ್ಪಿದ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು, ರಕ್ಷಣಾ ತಂಡಗಳೊಂದಿಗೆ ಸ್ಥಳಕ್ಕೆ ಆಗಮಿಸಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಹಳಿಯನ್ನು ದುರಸ್ತಿ ಪಡಿಸುವಲ್ಲಿ ಯಶಸ್ವಿಯಾಗಿದ್ದರು.
