
ಉದಯವಾಹಿನಿ, ಬಲೂಚಿಸ್ತಾನವನ್ನು ಅಪಾರ ಸಂಪತ್ತಿನಿಂದ ತುಂಬಿದ ಕೋಣೆಯೆಂದು ಹೇಳಬಹುದು. ಚಿನ್ನ, ತಾಮ್ರ, ನೈಸರ್ಗಿಕ ಅನಿಲ, ಕಲ್ಲಿದ್ದಲು ಹಾಗೂ ಅಮೂಲ್ಯ ಖನಿಜಗಳಿಂದ ಈ ಪ್ರದೇಶ ಸಮೃದ್ಧವಾಗಿದೆ. ಆದರೆ ಈ ಸಂಪತ್ತಿನ ನಿಜವಾದ ಮಾಲೀಕರಾದ ಬಲೂಚ್ ಜನರಿಗೆ ತಮ್ಮದೇ ಭೂಮಿಯ ಸಂಪತ್ತಿನ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ರಾಜಸ್ಥಾನಕ್ಕಿಂತ ಸ್ವಲ್ಪ ದೊಡ್ಡದಾದ ಬಲೂಚಿಸ್ತಾನ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯ. ಜನವರಿ 31 ಮತ್ತು ಫೆಬ್ರವರಿ 1ರ ನಡುವೆ ಇಲ್ಲಿ ಭೀಕರ ಹಿಂಸಾಚಾರ ನಡೆದಿದೆ. ಬಲೂಚ್ ಲಿಬರೇಶನ್ ಆರ್ಮಿ (BLA) ರಾಜ್ಯಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿದ್ದು, ಪೊಲೀಸ್ ಠಾಣೆಗಳು, ಸರ್ಕಾರಿ ಕಟ್ಟಡಗಳು ಹಾಗೂ ಜೈಲುಗಳನ್ನೂ ಗುರಿಯಾಗಿಸಿಕೊಂಡಿತು. ಈ ದಾಳಿಗಳಲ್ಲಿ 17 ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಈ ಸಂಘರ್ಷಗಳ ಹಿಂದೆ ಇರುವ ನಿಜವಾದ ಕಾರಣವೆಂದರೆ ಬಲೂಚಿಸ್ತಾನದ ಖನಿಜ ಸಂಪತ್ತು ಎನ್ನಲಾಗುತ್ತಿದೆ. ಕೇವಲ 15 ಲಕ್ಷ ಜನಸಂಖ್ಯೆ ಹೊಂದಿರುವ ಈ ಪ್ರದೇಶದ ಮಣ್ಣಿನ ಅಡಿಯಲ್ಲಿ ಜಗತ್ತಿಗೆ ಹಂಚುವಷ್ಟು ಚಿನ್ನ, ತಾಮ್ರ ಮತ್ತು ನೈಸರ್ಗಿಕ ಅನಿಲವಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿಯೇ ಚೀನಾ ರಸ್ತೆ ನಿರ್ಮಾಣ, ಗಣಿಗಾರಿಕೆ ಮತ್ತು ಬಂದರು ಅಭಿವೃದ್ಧಿಯಲ್ಲಿ ಭಾರೀ ಹೂಡಿಕೆ ಮಾಡುತ್ತಿದೆ.
ರೆಕೊ ಡಿಕ್ ಪ್ರದೇಶವನ್ನು ಜಗತ್ತಿನ ಅತಿದೊಡ್ಡ ಚಿನ್ನ ಮತ್ತು ತಾಮ್ರ ನಿಕ್ಷೇಪಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಇಲ್ಲಿ ಸುಮಾರು 5.9 ಶತಕೋಟಿ ಟನ್ ಖನಿಜ ಸಂಪತ್ತು ಇದೆ ಎನ್ನಲಾಗಿದೆ. ಸೆಂಡಕ್ ಪ್ರದೇಶದಲ್ಲಿಯೂ ತಾಮ್ರ ಮತ್ತು ಬೆಳ್ಳಿಯ ಅಪಾರ ನಿಕ್ಷೇಪಗಳಿದ್ದು, ಇವುಗಳನ್ನು ಚೀನೀ ಕಂಪನಿಗಳು ನಿರ್ವಹಿಸುತ್ತಿವೆ. ಆದರೆ ಹೊರತೆಗೆದ ಸಂಪತ್ತು ನೇರವಾಗಿ ಚೀನಾಕ್ಕೆ ಸಾಗುತ್ತಿದೆ ಎಂಬ ಆರೋಪ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.
ನೈಸರ್ಗಿಕ ಅನಿಲದ ವಿಷಯದಲ್ಲಿ ಸುಯಿ ಪ್ರದೇಶ ಪ್ರಮುಖವಾಗಿದೆ. 1952ರಲ್ಲಿ ಡೇರಾ ಬುಗ್ಟಿಯಲ್ಲಿ ಪಾಕಿಸ್ತಾನದ ಅತಿದೊಡ್ಡ ಅನಿಲ ನಿಕ್ಷೇಪ ಪತ್ತೆಯಾದರೂ, ದಶಕಗಳ ಕಾಲ ಬಲೂಚಿಸ್ತಾನದ ಹಳ್ಳಿಗಳಿಗೆ ಅನಿಲ ಪೈಪ್‌ಗಳು ತಲುಪಲೇ ಇಲ್ಲ. ತಮ್ಮ ಅನಿಲದಿಂದ ದೇಶದ ದೊಡ್ಡ ನಗರಗಳು ಬೆಳಗುತ್ತಿದ್ದರೂ, ತಾವೇ ಅಡುಗೆಗೆ ಮರದ ಬೆಂಕಿ ಬಳಸಬೇಕಾದ ಸ್ಥಿತಿ ಇದೆ ಎಂದು ಬಲೂಚ್ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
