ಉದಯವಾಹಿನಿ, ಗಾಝಾ: ಗಾಝಾದಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 6 ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿರುವುದಾಗಿ ಫೆಲೆಸ್ತೀನಿಯನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಮಧ್ಯೆ ರಫಾ ಗಡಿದಾಟು ಮೂಲಕ ರೋಗಿಗಳ ಸ್ಥಳಾಂತರ ಪ್ರಕ್ರಿಯೆಯನ್ನು ಇಸ್ರೇಲ್ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ.
ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರ ಹಾಗೂ ಗಾಝಾ ನಗರದ ಉತ್ತರ ಭಾಗದಲ್ಲಿ ಇಸ್ರೇಲ್ ಪಡೆಗಳು ವೈಮಾನಿಕ ಮತ್ತು ಗುಂಡಿನ ದಾಳಿ ನಡೆಸಿವೆ. ಮೃತರಲ್ಲಿ 5 ತಿಂಗಳ ಮಗು ಸೇರಿದಂತೆ 6 ಮಕ್ಕಳು ಸೇರಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಝಾದಲ್ಲಿ ಇಸ್ರೇಲಿ ಸೈನಿಕರ ಮೇಲೆ ಬಂದೂಕುಧಾರಿ ಗುಂಡು ಹಾರಿಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ಪಡೆ ಪ್ರತಿದಾಳಿ ನಡೆಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಬುಧವಾರ ರಫಾ ಗಡಿದಾಟು ಮೂಲಕ ನಿರ್ಗಮಿಸಲು ರೋಗಿಗಳು ಖಾನ್ ಯೂನಿಸ್ ನ ಆಸ್ಪತ್ರೆಯಲ್ಲಿ ಸಿದ್ಧವಾಗಿದ್ದರೂ ಸ್ಥಳಾಂತರ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ರೆಡ್ ಕ್ರೆಸೆಂಟ್ ಅಧಿಕಾರಿಗಳು ತಿಳಿಸಿದ್ದಾರೆ.
