ಉದಯವಾಹಿನಿ,: ಗೀತರಚನೆ ಎನ್ನುವುದು ಕಲಿಯೋದು, ಕಲಿಸೋದಲ್ಲ. ಕನ್ನಡ ಕಾವ್ಯ, ಸಾಹಿತ್ಯ ಓದಬೇಕು. ಜನಜೀವನ ನೋಡಬೇಕು. ಬರವಣಿಗೆ ಎನ್ನುವುದು ನಮ್ಮ ಸುಪ್ತಮನಸ್ಸಿನಿಂದ ಬರುವಂತದ್ದು. ಅದಕ್ಕೆ ಯಾವುದೇ ತರಬೇತಿ, ಕಾರ್ಯಾಗಾರ ಇರುವುದಿಲ್ಲ ಎಂದು ಖ್ಯಾತ ಸಾಹಿತಿ ಮತ್ತು ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೀತರಚನೆಯನ್ನು ಕಲಿಸುವುದಕ್ಕಾಗುವುದಿಲ್ಲ. ಕನಸ್ಸಿನಲ್ಲಿ ಒಮ್ಮೊಮ್ಮೆ ಅಮೂರ್ತವಾಗಿ ಏನೇನೋ ಕಾಣುತ್ತದಲ್ಲ, ಗೀತರಚನೆಯೂ ಹಾಗೆಯೇ. ನಿರ್ದೇಶನ, ನಟನೆಯ ತರಹ ಗೀತರಚನೆಗೆ ತರಬೇತಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ತರಬೇತಿ ಪಡೆದರೆ, ಜಿಮಿನಂದ ಬಂದ ಒಂದೇ ತರಹ ದೇಹಗಳ ಹಾಗೆ ಕಾಣುತ್ತದೆ. ಬ್ಯೂಟಿ ಪಾರ್ಲರ್‌ನಿಂದ ಬಂದ ವಧುವಿನ ಹಾಗೆ ಎಲ್ಲವೂ ಒಂದೇ ರೀತಿ ಕಾಣುತ್ತದೆ. ನಿಮ್ಮ ಛಾಪು ಮೂಡಿಸಬೇಕೆಂದರೆ ಸ್ವತಂತ್ರವಾಗಿ ಬರೆಯುವುದಕ್ಕೆ ಕಲಿಯಬೇಕು ಎಂದು ಹೇಳಿದರು.
ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿರಬೇಕು. ಹಳೆಯದೆಲ್ಲಾ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪು. ಅಂದರೆ ನಾವು ಸಹ ಮೊದಲ ಹಾಗಿಲ್ಲ ಎಂದರ್ಥ. ಎಲ್ಲಾ ಕಡೆ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲು ನಮ್ಮೂರಿನಲ್ಲಿ ಸಾಕಷ್ಟು ಹಿರಿಯರಿದ್ದರು. ಈಗ ನಾನೇ ಹಿರಿಯ ಎನ್ನುವಂತಾಗಿದೆ. ಸಮಯ ಬದಲಾಗುತ್ತಿರುತ್ತದೆ. ತಂತ್ರಜ್ಞಾನ ಬೆಳೆಯುತ್ತಿದೆ. ನಾವು ಸಹ ಬದಲಾಗಬೇಕಾಗುತ್ತದೆ. ಹಳೆಯದೇ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪು ಎಂದು ಹೇಳಿದರು.
